ಕೇರಳ : ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಕೇರಳದ ಕಡಮಕ್ಕುಡಿ ದ್ವೀಪಕ್ಕೆ ಭೇಟಿ ನೀಡಿ, ಹಳ್ಳಿ ಪ್ರದೇಶದ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣವನ್ನು ಸವಿದರು.
ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಕಡಮಕ್ಕುಡಿ ದ್ವೀಪದ ಸುಂದರ ನೋಟಗಳ ಫೋಟೋಗಳನ್ನು ಹಂಚಿಕೊಂಡು, ಸ್ಥಳದ ಪರಿಸರ ಶುದ್ಧತೆ ಮತ್ತು ಹಸಿರಿನ ದೃಶ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಹಳ್ಳಿಯ ಹಿನ್ನೀರು, ನಿಧಾನವಾಗಿ ಹರಿಯುವ ಕಾಲುವೆಗಳು, ಸಣ್ಣ ದೋಣಿಗಳು ಹಾಗೂ ಸ್ಥಳೀಯ ಜೀವರಾಶಿಯ ನೋಟಗಳು ಕೇವಲ ದೃಶ್ಯವಲ್ಲ, ಮನಸ್ಸಿನ ಆನಂದವನ್ನು ಹೆಚ್ಚಿಸುವಂತಿವೆ.
ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿ “ಕೊಚ್ಚಿಯಲ್ಲಿ ನಮ್ಮ M101 ವಾರ್ಷಿಕ ನಾಯಕತ್ವ ಸಮ್ಮೇಳನದ ನಂತರ ನಾನು ಈ ಹಳ್ಳಿಗೆ ಭೇಟಿ ನೀಡಿ, ಅದರ ಶಾಂತ ಮತ್ತು ಸ್ವಚ್ಛ ಪರಿಸರವನ್ನು ನೇರವಾಗಿ ಅನುಭವಿಸಿದೆ. ಹಳ್ಳಿಯ ದೃಶ್ಯಗಳು ಕೇವಲ ಕಣ್ಣಿಗೆ ಸುಂದರವಲ್ಲ, ಅವು ಮನಸ್ಸನ್ನು ತಂಪಾಗಿಸುತ್ತದೆ.” ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಕಡಮಕ್ಕುಡಿ ದ್ವೀಪದ ಸ್ವಚ್ಛತೆಯನ್ನು ಮತ್ತು ಕೊಚ್ಚಿಯ ಹಿನ್ನೀರಿನ ಸುಂದರ ದೃಶ್ಯಗಳನ್ನು ಮೆಚ್ಚಿದ್ದಾರೆ. ಕಡಮಕ್ಕುಡಿ ದ್ವೀಪವು ಕೇರಳದ ಹಸಿರಿನ ಹಳ್ಳಿಗಳಲ್ಲಿ ಖ್ಯಾತಿ ಪಡೆದಿದ್ದು, ಪ್ರಕೃತಿ ಪ್ರಿಯರಿಗಾಗಿ ಪ್ರಮುಖ ಪ್ರವಾಸಿ ತಾಣವಾಗಿದೆ

































