ನವದೆಹಲಿ : ಭಾರತದ ಪ್ರಮುಖ ವಿಮಾನಯಾನ ಕಂಪನಿ ಇಂಡಿಗೋ ಇತ್ತೀಚೆಗೆ ದೇಶದ ಹಲವು ನಗರಗಳಲ್ಲಿ ವಿಮಾನಗಳನ್ನು ರದ್ದುಪಡಿಸಿ, ವಿಳಂಬಗೊಳಿಸಿದ್ದರಿಂದ ಭಾರೀ ವಿವಾದಕ್ಕೆ ಗುರಿಯಾಯಿತು. ಬೆಂಗಳೂರು ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ಉಂಟಾಯಿತು. ಸಿಬ್ಬಂದಿ ಕೊರತೆಯಿಂದ ಉಂಟಾದ ಅವ್ಯವಸ್ಥೆಗೆ ಪ್ರಯಾಣಿಕರು ಹಾಗೂ ಕೇಂದ್ರ ಸರ್ಕಾರವೂ ಅಕ್ರೋಶ ವ್ಯಕ್ತಪಡಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಇಂಡಿಗೋ ವಿರುದ್ಧ ತೀವ್ರ ವಿಮರ್ಶೆಯ ಜೊತೆಗೆ, ಕೆಲವರು ವಿಮಾನ ನಿಲ್ದಾಣದಲ್ಲೇ ಭಜನೆ ಮಾಡುತ್ತಿರುವ ವಿಡಿಯೋಗಳೂ ವೈರಲ್ ಆಗಿದ್ದವು.
ಆದರೆ ಈ ನಡುವೆ ಒಂದು ಸಕಾರಾತ್ಮಕ ಘಟನೆ ಗಮನಸೆಳೆಯುತ್ತಿದೆ. ಆಯಿರಾ ಗೌರವ್ ಎಂಬ ಪ್ರಯಾಣಿಕರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 9 ಗಂಟೆಗಳ ವಿಳಂಬಕ್ಕೆ ಇಂಡಿಗೋ ಸಿಬ್ಬಂದಿಯವರು ಕ್ಷಮೆ ಕೇಳಿ, ಪ್ರಯಾಣಿಕರಿಗೆ ವಿಶೇಷ ಉಡುಗೊರೆ ನೀಡಿರುವ ಘಟನೆ ಅದರಲ್ಲಿ ಕಾಣಿಸಿಕೊಳ್ಳುತ್ತದೆ.
“ಇಂಡಿಗೋ ವಿಮಾನ ನಮ್ಮನ್ನು ಒಟ್ಟು 9 ಗಂಟೆಗಳ ಕಾಲ ಕಾಯಿಸಿತು. ಇದಕ್ಕಾಗಿ ಸಿಬ್ಬಂದಿಯವರು ಕ್ಷಮೆಯಾಚಿಸಿ, ಗಿಫ್ಟ್ ಹ್ಯಾಂಪರ್ ನೀಡಿದರು. ಅದನ್ನು ತೆರೆದಾಗ ಅದರಲ್ಲಿ ಗೌರ್ಮೆಟ್ ಪಾಪ್ಕಾರ್ನ್, ಮೆಥಿ ಮಾತ್ರಿ, ಮಿಶ್ರ ಹಣ್ಣಿನ ಜ್ಯೂಸ್ ಮತ್ತು ಸ್ಯಾಮ್ಸಂಗ್ ಕಾರ್ಡ್ ಇದ್ದವು.” ಎಂಬುವುದಾಗಿ ಆಯಿರಾ ಗೌರವ್ ತಮ್ಮ ಪೋಸ್ಟ್ನಲ್ಲಿ ಹೀಗೆ ತಿಳಿಸಿದ್ದಾರೆ.
ಈ ವಿಡಿಯೋವನ್ನು ನೋಡಿ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಒಟ್ಟು ಇನ್ನೂರು ರೂಪಾಯಿಯ ಗಿಫ್ಟ್!” ಎಂದು ವ್ಯಂಗ್ಯವಾಡಿದರೆ, ಮತ್ತೊಬ್ಬರು “ಕ್ಷಮೆಯಾಚನೆ ಸ್ವೀಕರಿಸಲಾಗಲಿಲ್ಲ” ಎಂದು ಹೇಳಿದ್ದಾರೆ. ಇನ್ನು ಕೆಲವರು, ಇಂತಹ ಗಿಫ್ಟ್ಗಳು ಸಾಮಾನ್ಯವಾಗಿ ಕಾರ್ಪೊರೇಟ್ ಬುಕಿಂಗ್ಗಳಿಗೆ ಮಾತ್ರ ನೀಡಲಾಗುತ್ತವೆ ಎಂದು ಹೇಳಿದ್ದಾರೆ.
ಪ್ರಸ್ತುತ ಇಂಡಿಗೋ ಪ್ರತಿದಿನ ಸುಮಾರು 2,200 ವಿಮಾನಗಳನ್ನು ಸಂಚರಿಸುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಇತ್ತೀಚೆಗೆ ಗೊಂದಲಗಳು ಹೆಚ್ಚಾಗಿವೆ. ಇದರ ಪರಿಣಾಮ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಜೈಪುರ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿದೆ.






























