ನವದೆಹಲಿ: ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು ಸಹೋದರರ ಮೇಲೆ 48 ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಈಶಾನ್ಯ ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ.
ಜಾಫ್ರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಚೌಹಾಣ್ ಬಂಗೇರ್ ಪ್ರದೇಶದಲ್ಲಿ ಬೆಳಗಿನ ಜಾವ 1.30 ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಸಹೋದರರು ತಮ್ಮ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ 5 ಜನ ಅಪರಿಚಿತ ದುಷ್ಕರ್ಮಿಗಳು ಬಂದು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಪರಿಣಾಮ ಸಹೋದರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಸುಮಾರು ೪೮ ಸುತ್ತು ಗುಂಡು ಹಾರಿಸಲಾಗಿದೆ. ಇಬ್ಬರೂ ಗುಂಡಿನ ದಾಳಿಗೆ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದರು. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಜಫ್ರಾಬಾದ್ನ ನಿವಾಸಿ ಅಬ್ದುಲ್ ಅವರ ಪುತ್ರ ಫಜೀಲ್ (31) ಮೃತಪಟ್ಟಿರುವುದು ಕಂಡುಬಂದಿದೆ. ಅವರ ಅಣ್ಣ ನದೀಮ್ (33) ಅವರನ್ನು ಕುಟುಂಬ ಸದಸ್ಯರು ಜೆಪಿಸಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಗುಂಡು ಹಾರಿಸಿದ ತಕ್ಷಣ ದಾಳಿಕೋರರು ತಮ್ಮ ಸ್ಕೂಟರ್ ಅನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳದಿಂದ ಹಲವಾರು ಜೀವಂತ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಗುಂಡಿನ ತೀವ್ರತೆಯನ್ನು ಸೂಚಿಸುತ್ತದೆ. ಪ್ರದೇಶವನ್ನು ಪರೀಕ್ಷಿಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.































