ಚಿತ್ತೂರು : ನಾಯಿ ಎಂದರೆ ನಿಷ್ಠೆಯ ಮತ್ತೊಂದು ಹೆಸರು. ಒಂದು ತುತ್ತು ಊಟ ಕೊಟ್ಟರೂ ಸಾಕು, ಜೀವ ಇರುವವರೆಗೂ ತನ್ನ ಮಾಲೀಕರನ್ನು ಕಾಯುವ ಪ್ರಾಣಿ ಅದು. ಅಪಾಯ ಎದುರಾದಾಗ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕರನ್ನು ರಕ್ಷಿಸುವ ನಾಯಿ, ಕುಟುಂಬದ ಸದಸ್ಯನಂತೆಯೇ ಆಗಿಬಿಡುತ್ತದೆ. ಇಂತಹ ನಿಷ್ಠೆಯ ಸಂಕೇತವಾಗಿ ಚಿತ್ತೂರು ಜಿಲ್ಲೆಯ ವೈದ್ಯರ ಕುಟುಂಬವೊಂದು ತಮ್ಮ ನಾಯಿಯ ಸಾವಿನ ನಂತರ ಅದಕ್ಕೆ ಭವ್ಯ ಸಮಾಧಿ ನಿರ್ಮಿಸಿ ಪೂಜೆ ಸಲ್ಲಿಸುತ್ತಿದೆ.
ಚಿತ್ತೂರಿನ ಡಾ. ಸುದರ್ಶನ್ ಹಾಗೂ ಗಾಯತ್ರಿ ದೇವಿ ದಂಪತಿ ಸುಮಾರು 9 ವರ್ಷಗಳ ಹಿಂದೆ ತಮ್ಮ ಮನೆಗೆ ರೊಟ್‌ವೀಲರ್ ತಳಿಯ ನಾಯಿಯನ್ನು ತಂದಿದ್ದರು. ಅದಕ್ಕೆ ಅವರು ಪ್ರೀತಿಯಿಂದ ‘ಬಾಕ್ಸಿ’ ಎಂದು ಹೆಸರಿಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೇ ಮನೆಯವರೇ ಬೆಳೆಸಿದ್ದರಿಂದ ಬಾಕ್ಸಿ ಕೇವಲ ಸಾಕು ಪ್ರಾಣಿಯಾಗಿರದೆ, ಮನೆಯೊಬ್ಬ ಸದಸ್ಯನಾಗಿತ್ತು.
ಬಾಕ್ಸಿ ಮನೆಯ ಭದ್ರತೆಯಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಮನೆಯಲ್ಲಿ ಎರಡು ಬಾರಿ ಕಳ್ಳತನ ನಡೆದಾಗ, ಕಳ್ಳರನ್ನು ಹಿಡಿಯಲು ಬಾಕ್ಸಿಯೇ ಸಹಾಯ ಮಾಡಿತ್ತು. ಇದರಿಂದಾಗಿ ಮನೆಯವರಲ್ಲಿ ಅದು ಇನ್ನಷ್ಟು ಪ್ರೀತಿ ಮತ್ತು ಗೌರವವನ್ನು ಗಳಿಸಿತ್ತು.
ಇತ್ತೀಚೆಗೆ ಬಾಕ್ಸಿ ತೀವ್ರ ಅನಾರೋಗ್ಯಕ್ಕೆ ಒಳಗಾಯಿತು. ಕುಟುಂಬದವರು ಅದನ್ನು ಉಳಿಸಲು ಪ್ರಯತ್ನಿಸಿದರು. ಚಿತ್ತೂರು ಮಾತ್ರವಲ್ಲದೆ, ಚೆನ್ನೈ ಮತ್ತು ಬೆಂಗಳೂರಿನ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಇದಕ್ಕಾಗಿ ಸುಮಾರು 7 ಲಕ್ಷ ರೂಪಾಯಿ ವೆಚ್ಚ ಮಾಡಲಾಯಿತು. ಆದರೆ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ನವೆಂಬರ್ 11 ರಂದು ಚಿಕಿತ್ಸೆ ಪಡೆಯುತ್ತಿದ್ದಾಗ ಬಾಕ್ಸಿ ಕೊನೆಯುಸಿರೆಳೆದಿತು.
ಬಾಕ್ಸಿಯ ಸಾವು ಕುಟುಂಬದವರಿಗೆ ಅತೀವ ದುಃಖ ತಂದೊಡ್ಡಿತು. ಅದರ ನೆನಪಿಗಾಗಿ, ನಾಯಿಗೆ ಸಾಂಪ್ರದಾಯಿಕ ಅಂತ್ಯಕ್ರಿಯೆ ನೆರವೇರಿಸಿ, ಭಾರಿ ವೆಚ್ಚದಲ್ಲಿ ಸಮಾಧಿಯನ್ನು ನಿರ್ಮಿಸಿದರು. ಸಮಾಧಿಯ ಮೇಲ್ಭಾಗದಲ್ಲಿ ಬಾಕ್ಸಿಯ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಇಂದಿಗೂ ಕುಟುಂಬದವರು ಪ್ರತಿದಿನ ಸಮಾಧಿಗೆ ತೆರಳಿ, ಬಾಕ್ಸಿಯನ್ನು ಸ್ಮರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಘಟನೆ, ನಾಯಿ ಮತ್ತು ಮಾನವನ ನಡುವಿನ ನಿಷ್ಠೆ ಹಾಗೂ ಭಾವನಾತ್ಮಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

































