ಮುಂಬೈ : ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್ ಹಾಲ್ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮುಂಬೈನಲ್ಲಿ ಗುರುವಾರ ನಡೆದಿದೆ. ಥಾಣೆ ಜಿಲ್ಲೆಯ ಘೋಡ್ಬಂದರ್ ಪ್ರದೇಶದಲ್ಲಿರುವ ಮದುವೆ ಮಂಟಪದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಅಚಾನಕ್ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಬೆಂಕಿಯ ತೀವ್ರತೆ ಹೆಚ್ಚಾಗುವ ಮುನ್ನವೇ ವಧು-ವರರು, ಅತಿಥಿಗಳು ಹಾಗೂ ಸಿಬ್ಬಂದಿ ಸೇರಿ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ, ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಆದರೆ ನಿಖರ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಗೋವಾದ ನೈಟ್ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡ ಘಟನೆ ಇನ್ನೂ ಮರೆಮಾಚದಿರುವ ಸಮಯದಲ್ಲೇ, ಈ ಘಟನೆ ಮತ್ತೆ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಒತ್ತಿಹೇಳಿದೆ.
































