ಜಮ್‌ಶೆಡ್‌ಪುರ: ತಂತ್ರಜ್ಞಾನ ಬೆಳೆದಂತೆಲ್ಲಾ ಅಪರಾಧಿಗಳು ಕೂಡ ಅಷ್ಟೇ ಅಪ್‌ಡೇಟ್ ಆಗುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗೂಗಲ್ ಮ್ಯಾಪ್ ಮೂಲಕ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಬಿಹಾರ ಮೂಲದ ಅಂತರರಾಜ್ಯ ಕಳ್ಳರ ತಂಡವನ್ನು ಜಮ್‌ಶೆಡ್‌ಪುರ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಮೂರು ರಾಜ್ಯಗಳಲ್ಲಿ ಈ ಗ್ಯಾಂಗ್ ತನ್ನ ಕೈಚಳಕ ತೋರಿಸುತ್ತಿತ್ತು.
ಗೂಗಲ್ ಮ್ಯಾಪ್ ಬಳಸಿ ಸ್ಕೆಚ್ ಈ ತಂಡದ ಕಾರ್ಯವೈಖರಿ ಕೇಳಿದರೆ ಪೊಲೀಸರೇ ಅಚ್ಚರಿಗೊಂಡಿದ್ದಾರೆ. ಯಾವುದೇ ಪರಿಚಿತರಿಲ್ಲದ ನಗರಕ್ಕೆ ಭೇಟಿ ನೀಡುತ್ತಿದ್ದ ಈ ಕಳ್ಳರು, ಗೂಗಲ್ ಮ್ಯಾಪ್ ಮೂಲಕ ಜನವಸತಿ ಪ್ರದೇಶಗಳಲ್ಲಿರುವ ಐಷಾರಾಮಿ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಹೀಗೆ ಸ್ಕೆಚ್ ಹಾಕಿದ ನಂತರ ರಾತ್ರಿ ವೇಳೆ ಕಳ್ಳತನ ಎಸಗುತ್ತಿದ್ದರು. ಕಳ್ಳತನ ಮಾಡಿದ ತಕ್ಷಣ ಯಾರಿಗೂ ಅನುಮಾನ ಬರದಂತೆ ಅದೇ ವೇಗದಲ್ಲಿ ಆ ನಗರವನ್ನು ಬಿಟ್ಟು ಪಾರಾಗುತ್ತಿದ್ದರು. ಈ ಮೂಲಕ ಮೂರು ರಾಜ್ಯಗಳಲ್ಲಿ ಒಟ್ಟು ಆರು ದೊಡ್ಡ ಮನೆಗಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಿಕ್ಕಿಬಿದ್ದಿದ್ದು ಹೇಗೆ? ಸೆಪ್ಟೆಂಬರ್ 19 ರಂದು ಗೋಲ್ಮುರಿಯ ರಿಷಭ್ ಕುಮಾರ್ ಎಂಬುವವರ ಮನೆಯಲ್ಲಿ ನಡೆದ ಕಳ್ಳತನ ಈ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎಸ್‌ಎಸ್‌ಪಿ ಪಿಯೂಷ್ ಪಾಂಡೆ ನೇತೃತ್ವದ ವಿಶೇಷ ತಂಡ, ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದೆ. ತಾಂತ್ರಿಕ ವಿಶ್ಲೇಷಣೆ ಮತ್ತು ಗುಪ್ತಚರ ಮಾಹಿತಿ ಆಧಾರದ ಮೇಲೆ ಬಿಹಾರದ ಪಾಟ್ನಾದಲ್ಲಿ ಅಡಗಿದ್ದ ವಿಕಾಸ್ ಕುಮಾರ್ (27), ರಾಜು ಕುಮಾರ್ (49) ಮತ್ತು ಮೊಹಮ್ಮದ್ ಇರ್ಫಾನ್ (26) ಎಂಬುವವರನ್ನು ಸೆರೆಹಿಡಿಯಲಾಗಿದೆ.
ಮಾರಕಾಸ್ತ್ರಗಳ ವಶ ಬಂಧಿತರಿಂದ ಒಂದು ಪಿಸ್ತೂಲ್, ಜೀವಂತ ಗುಂಡುಗಳು, ಕಳವು ಮಾಡಲಾಗಿದ್ದ ಬಂಗಾರದ ಆಭರಣಗಳು ಹಾಗೂ ಮನೆ ಮುರಿಯಲು ಬಳಸುತ್ತಿದ್ದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ತಂಡಕ್ಕೆ ಸ್ಥಳೀಯವಾಗಿ ಯಾರಾದರೂ ಸಹಾಯ ಮಾಡುತ್ತಿದ್ದರೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.































