ದೇಶ ಕಂಡ ಅಪರೂಪದ ರಾಜಕಾರಣಿ, ಶಾಮನೂರು ಶಿವಶಂಕರಪ್ಪ: ಮುಖ್ಯಮಂತ್ರಿ ಸಿದ್ದರಾಮಯ್ಯ

WhatsApp
Telegram
Facebook
Twitter
LinkedIn

 

    ದಾವಣಗೆರೆ : ಡಾ;ಶಾಮನೂರು ಶಿವಶಂಕರಪ್ಪನವರು ದೇಶ ಕಂಡ ಅಪರೂಪದ ಮಾಜಿ ಮಂತ್ರಿ ಹಾಗೂ ಹಿರಿಯ ಶಾಸಕರಾಗಿದ್ದು ಸದಾ ಕ್ರಿಯಾಶೀಲ ವ್ಯಕ್ತಿಯಾಗಿ ದಾವಣಗೆರೆಯನ್ನು ವಿದ್ಯಾಕಾಶಿಯಾಗಿ ಬೆಳೆಸಿ ಉದ್ಯಮಿಯಾಗಿ ಹಾಗೂ ದೀರ್ಘಕಾಲ ಶಾಸಕರಾಗಿ ರಾಜ್ಯ ಹಾಗೂ ದಾವಣಗೆರೆ ಅಭಿವೃದ್ದಿಗೆ ಸೇವೆ ಸಲ್ಲಿಸಿದ ಅಜಾತಶತೃವಾಗಿ ಬದುಕ್ಕಿದ್ದರು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಿಳಿಸಿದರು.

ಅವರು ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಶುಕ್ರವಾರ ಲಿಂ.ಡಾ; ಶಾಮನೂರು ಶಿವಶಂಕರಪ್ಪನವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಾಮನೂರು ಶಿವಶಂಕರಪ್ಪನವರ ಪುತ್ಥಳಿ ಅನಾವರಣಗೊಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಮನೂರು ಶಿವಶಂಕರಪ್ಪನವರು 95 ವರ್ಷಗಳ ಕಾಲ ಬದುಕಿದ್ದರು. 1931 ರಲ್ಲಿ ಜನಿಸಿ ಇವರ 95 ನೇ ಹುಟ್ಟಿದ ಹಬ್ಬದಲ್ಲಿ ಭಾಗಿಯಾಗಿ ಆ ಸಂದರ್ಭದಲ್ಲಿ ದಾಲ್ ಮಿಲ್ ಉದ್ಘಾಟನೆಯಲ್ಲಿ ಭಾಗವಹಿಸಿ ಶತಾಯುಷಿಯಾಗುತ್ತಾರೆ ಅಂದುಕೊಂಡಿದ್ದೆ. ಆದರೆ ಅವರ ಅಗಲಿಕೆ ನಾಡಿಗೆ, ಪಕ್ಷಕ್ಕೆ ನಷ್ಟವಾಗಿದೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.

ಅವರು ಬಹಳ ಕ್ರಿಯಾಶೀಲ ವ್ಯಕ್ತಿ, ಸದಾ ವ್ಯಾಪಾರ, ಉದ್ದಿಮೆ ಕಾರ್ಖಾನೆ ಸ್ಥಾಪನೆ ಬಗ್ಗೆ ಯೋಚಿಸುತ್ತಿದ್ದರು. ಬಹಳ ಧೀರ್ಘಕಾಲ ಕಾಂಗ್ರೆಸ್ ಪಕ್ಷದ ಖಜಾಂಚಿ, ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿದ್ದರು. ವೀರಶೈವ ಮಹಾಸಭಾದಿಂದ ಮಹಿಳಾ ವಿ.ವಿ. ಸ್ಥಾಪನೆ ಮಾಡಿ ಅಕ್ಕಮಹಾದೇವಿ ಹೆಸರು ಇಟ್ಟಿದ್ದರಿಂದ ಮತ್ತು ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕೆಂದು ಆದೇಶಿಸಿದ್ದಕ್ಕಾಗಿ ಸನ್ಮಾನಿಸಿದ್ದರು.

ಅವರೊಬ್ಬ ಜಾತ್ಯಾತೀತ ನಾಯಕರಾಗಿದ್ದರು ಎಂಬುದಕ್ಕೆ ನಿದರ್ಶನ, ಅವರು ಗೆದ್ದ ಕ್ಷೇತ್ರದಲ್ಲಿ ಅವರ ಜಾತಿಯವರು ಕಡಿಮೆ ಇದ್ದು ಅವರ ಜನಪ್ರಿಯತೆಯಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಗೆಲುವು ಕಾಣಲು ಸಾಧ್ಯವಾಗಿದ್ದು 6 ಭಾರಿ ಸತತವಾಗಿ ಗೆಲುವು ಸಾಧಿಸಿದ್ದರು. ಕಳೆದ ಹುಟ್ಟುಹಬ್ಬದ ಸಂದರ್ಭದಲ್ಲಿ ಯಜಮಾನರೇ ಮತ್ತೊಂದು ಭಾರಿ ಚುನಾವಣೆಗೆ ನಿಲ್ಲುತ್ತೀರಾ ಎಂದು ಕೇಳಿದ್ದಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದರು ಎಂದು ಅವರ ಮಾತುಗಳನ್ನು ನೆನಪಿಸಿಕೊಂಡರು.

ಶಿವಶಂಕರಪ್ಪನವರು ಕೊಡುಗೈ ದಾನಿಗಳಾಗಿದ್ದು ಬಡವರಿಗೆ, ಮಹಿಳೆಯರಿಗೆ ಸಹಾಯ ಮಾಡುತ್ತಿದ್ದರು. ಅವರು ಆ ಮೂಲಕ ಜೀವನ ಸಾರ್ಥಕ ಮಾಡಿಕೊಂಡಿದ್ದರು. ಹುಟ್ಟು ಆಕಸ್ಮಿಕ, ಸಾವು ಗ್ಯಾರಂಟಿ. ಈ ನಡುವೆ ಸಮಾಜ ಮುಖಿಯಾಗಿ ಏನು ಮಾಡಿದೆವು ಎನ್ನುವುದು ಬಹಳ ಮುಖ್ಯ, ಆಗಾಗಿ ಜೀವನದಲ್ಲಿ ಸಾರ್ಥಕ ಕೆಲಸ ಮಾಡಬೇಕು ಎಂದು ಅವರ ಬದುಕನ್ನು ಮೆಲುಕುಹಾಕಿದರು.

ದಾವಣಗೆರೆ ಹಿಂದೆ ಜವಳಿ ನಗರವಾಗಿತ್ತು ನಂತರ ಇದು ವಿದ್ಯಾಕಾಶಿಯಾಯಿತು. ಅವರು ಕಾರ್ಯದರ್ಶಿಯಾದ ಬಾಪೂಜಿ ಈ ಸಂಸ್ಥೆಯಿಂದ ಅನೇಕ ವೈದ್ಯರು, ಇಂಜಿನಿಯರ್‍ಗಳಾಗಿದ್ದಾರೆ. ಅವರು ದಾವಣಗೆರೆ ವಿದ್ಯಾಕಾಶಿ, ಉದ್ಯಮಿ, ವ್ಯಾಪಾರಗಾರ, ಕೈಗಾರಿಕೋದ್ಯಮಿ, ವಿದ್ಯಾಸಂಸ್ಥೆ, ರಾಜಕಾರಿಣಿಯಾಗಿ ಬಹಳ ದೀರ್ಘಕಾಲ ಸೇವೆ ಸಲ್ಲಿಸಿ 62 ವಿದ್ಯಾಸಂಸ್ಥೆ ಕಟ್ಟಿದ್ದರು. ಅವರಿಗೆ ಮನುಷ್ಯತ್ವ ಇತ್ತು, ಅಜಾತಶತೃ, ಅವರ ಸ್ನೇಹಿತರು ಎಲ್ಲಾ ಪಕ್ಷದಲ್ಲಿದ್ದಾರೆ. ಅವರಂತಹ ವ್ಯಕ್ತಿಯನ್ನು ಸಮಾಜಕ್ಕೆ ಕೊಟ್ಟಿದ್ದು ಸಾರ್ಥಕವಾಗಿದೆ ಎಂದು ಡಾ;ಶಾಮನೂರು ಶಿವಶಂಕರಪ್ಪನವರನ್ನು ಸ್ಮರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ದಾನ, ಧರ್ಮ, ಸರಳತೆ, ಶಿಸ್ತಿನ ಜೀವನ ನಡೆಸಿ ಅಧಿಕಾರಕ್ಕಿಂತ ಆದರ್ಶ ಮುಖ್ಯವೆಂದು ಸಾರಿದ ಧೀಮಂತ ನಾಯಕ ಡಾ.ಶಾಮನೂರು ಶಿವಶಂಕರಪ್ಪ. ಅವರು 95 ವರ್ಷದ ಇಳಿವಯಸ್ಸಿನಲ್ಲಿಯೂ ಶಾಸಕರಾಗಿ ಜನರ ಸೇವೆ ಸಲ್ಲಿಸಿ ದೇಶದಲ್ಲಿಯೇ ಹಿರಿಯ ಶಾಸಕರೆಂಬ ದಾಖಲೆಯನ್ನು ಸೃಷ್ಠಿ ಮಾಡಿದಂತಹ ಏಕೈಕ ವ್ಯಕ್ತಿಯಾಗಿದ್ದವರು ಡಾ.ಶಾಮನೂರು ಶಿವಶಂಕರಪ್ಪ.  ನನ್ನ ಹಾಗೂ ಅವರ ಭಾಂದವ್ಯ ಹೇಗಿತ್ತು ಎಂದರೆ, ಅವರು ಎಷ್ಟು ದಿನ ವಿಧಾನಸಭೆಯಲ್ಲಿದ್ದರು, ಅಷ್ಟು ದಿನ ನಾನು ವಿಧಾನಸಭೆಯಲ್ಲಿ ಸದಸ್ಯನಾಗಿದ್ದೆನು,  ಶರಣರ ಗುಣವನ್ನು ಮರಣದಲ್ಲಿ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ. ಅದರಂತೆ ಮನುಷ್ಯನ ಬದುಕು ಶಾಶ್ವತವಲ್ಲ, ಆದರೆ ನಾವು ಬಿಟ್ಟು ಹೋಗುವ ಕೆಲಸಗಳು ಶಾಶ್ವತವಾಗಿರುತ್ತವೆ ಎಂಬಂತೆ ಅವರ ಕಾರ್ಯಗಳು ಶಾಶ್ವತವಾಗಿವೆ.

ಅವರ ಶ್ರೀಮಂತಿಕೆಯ ಜತೆಗೆÉ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದ ದೊಡ್ಡ ವ್ಯಕ್ತಿತ್ವ ಅವರದು.  ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎಂಬುದಕ್ಕಿಂತ, ಎಷ್ಟು ಜನರಿಗೆ ಬದುಕನ್ನು ಬದಲಾವಣೆ ಮಾಡಿದ್ದಾರೆ ಎಂಬುದು ಬಹಳ  ಮುಖ್ಯ. ಇದಕ್ಕೆ ಶಾಮನೂರು ಶಿವಶಂಕರಪ್ಪನವರೆ ದೊಡ್ಡ ಉದಾಹರಣೆ ಎಂದ ಅವರು. ಕೋವಿಡ್ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಇಡೀ ದಾವಣಗೆರೆ ಜನರಿಗೆ ಆರೋಗ್ಯವನ್ನು ನೀಡಿದಂತವರು, ಇಡೀ ಭಾರತದಲ್ಲಿ ಯಾರು ಈ ರೀತಿ ಸ್ವಂತ ಹಣದಿಂದ ಜನರ ಆರೋಗ್ಯದ ಬಗ್ಗೆ  ಕಾಳಜಿಯನ್ನು ವಹಿಸಿರಲಿಲ್ಲ, ಜಾತ್ಯಾತೀತವಾಗಿ ಜನರ ಸೇವೆಯನ್ನು ಸಲ್ಲಿಸಿದವರು ಎಂದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಮಾತನಾಡಿ, ದಾವಣಗೆರೆ ಬ್ರ್ಯಾಂಡ್ ಅಂಬಾಸಿಡರ್ ಎಂದು ಪ್ರಸಿದ್ದ ಪಡೆದಿದ್ದ, ಅಜಾತಶತೃ ಎಂದೆ ಕರೆಸಿಕೊಳ್ಳುತ್ತಿದ್ದ ಹಾಗೂ ಜವಳಿ ನಗರವೆಂದೇ ಪ್ರಸಿದ್ದ ಪಡೆದಿದ್ದ ದಾವಣಗೆರೆಯನ್ನು ಬಾಪೂಜಿ ವಿದ್ಯಾ ಸಂಸ್ಥೆ ಮೂಲಕ ವಿದ್ಯಾನಗರಿಯಾಗಿ ಮಾಡಿದವರು ನಮ್ಮ ಪೂಜ್ಯ ತಂದೆ ಶಾಮನೂರು ಶಿವಶಂಕರಪ್ಪನವರು,  6 ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಮತ್ತು ಸಂಸದರಾಗಿ ಸೇವೆ ಸಲ್ಲಿಸದವರು. ಅವರಿಗೆ ಬಡವರ ಬಗ್ಗೆ ವಿಶೇಷ ಕಾಳಜಿ ಇತ್ತು ಕೋವಿಡ್ ಸಂದರ್ಭದಲ್ಲಿ ಅವರು ಕೋವಿಡ್ ಲಸಿಕೆ ಹಾಗೂ ಆಹಾರ ಕಿಟ್ ಗಳನ್ನು ನೀಡಿದರು. 1967 ರೈಸ್ ಮಿಲ್ ಸ್ಥಾಪಿಸಿದರು. ನಂತರ 6 ಸಕ್ಕರೆ ಕಾರ್ಖಾನೆಗಳು ಮತ್ತು ತಮ್ಮ 95 ನೇ ವಯಸ್ಸಿನಲ್ಲಿ ಒಂದು ದಾಲ್ ಮಿಲ್ ಸ್ಥಾಪಿಸಿದರು.  ರೈತರು ಮತ್ತು ಕಾರ್ಮಿಕರ ಆರ್ಥಿಕ ಜೀವನ ಹೆಚ್ಚಿಸಿದ್ದು ಅಲ್ಲದೆ ಉದ್ಯೋಗವನ್ನು ಸೃಷ್ಠಿ ಮಾಡಿದರು ಎಂದರು.

ದಿವ್ಯಸಾನ್ನಿಧ್ಯ : ಬಾಳೇಹೊನ್ನುರು ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದ ಜಗದ್ಗುರು ಶ್ರೀ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು, ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಜಿಗಳವರು, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳು, ಭಗೀರಥ ಗುರುಪೀಠದ ಶ್ರೀಪುರಷೋತ್ತಮಾನಂದಪುರಿ ಸ್ವಾಮೀಜಿಗಳು, ಕೂಡಲ ಸಂಗಮ ಮಹಾಪೀಠದ ಶ್ರೀ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕೋಡಿಮಠದ ಡಾ; ಶಿವಾನಂದ ಶಿವಯೋಗಿ, ಪಂಚಮಸಾಲಿ ಪೀಠದ ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಾನಿಧ್ಯ ವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ವಿಧಾನಸಭೆ ಮುಖ್ಯಸಚೇತಕ ಅಶೋಕ್ ಎಂ ಪಟ್ಟಣ್,  ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಡಿ.ಜಿ.ಶಾಂತನಗೌಡ, ಬಸವರಾಜ್ ವಿ ಶಿವಗಂಗಾ, ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ , ಶ್ರೀ ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾಷ, ಮಾಜಿ ಸಚಿವರುಗಳಾದ ಎಸ್.ಎ.ರವೀಂದ್ರನಾಥ್, ರೇಣುಕಾಚಾರ್ಯ, ಹೆಚ್.ಆಂಜನೇಯ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಾಡಾಳು ವಿರೂಪಾಕ್ಷಪ್ಪ  ಮತ್ತು ಪೂರ್ವ ವಲಯ ಪೊಲೀಸ್ ಮಹಾನೀರಿಕ್ಷಕ ಡಾ; ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಎಸ್.ಪಿ. ಉಮಾಪ್ರಶಾಂತ್ ಸೇರಿದಂತೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಾಸ್ರಾವಿಕವಾಗಿ ಮಾತನಾಡಿದರು. ಶಾಮನೂರು ಕುಟುಂಬದ ಸದಸ್ಯರು ಸೇರಿದಂತೆ ಅಪಾರ ಬಂದುಬಳಗದವರು ಭಾಗವಹಿಸಿದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon