ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜ್ಗೆ ಹೈಕೋರ್ಟ್ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠವು ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾ. ಬಿ. ಬಸವರಾಜ ಅವರಿದ್ದ ಪೀಠ, ಶಾಸಕ ಬೈರತಿ ಬಸವರಾಜ್ ಪರ ವಾದ ಮಂಡಿಸಿದ ವಕೀಲ ಸಂದೇಶ್ ಚೌಟ ಅವರ ವಾದವನ್ನು ಪರಿಗಣಿಸಿ, ಬಂಧನವಾದರೆ ತಕ್ಷಣವೇ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ನೀಡಿದೆ. ವಕೀಲ ಸಂದೇಶ್ ಚೌಟ ಅವರು ವಾದ ಮಂಡಿಸಿ, ಸಿಐಡಿ ತನಿಖೆ ಆರಂಭವಾಗಿ ಐದು ತಿಂಗಳು ಕಳೆದಿದ್ದರೂ, ಈವರೆಗೆ ಶಾಸಕ ಬೈರತಿ ಬಸವರಾಜ್ ವಿರುದ್ಧ ಯಾವುದೇ ದೃಢ ಸಾಕ್ಷ್ಯ ದೊರೆತಿಲ್ಲ ಎಂದು ಕೋರ್ಟ್ಗೆ ತಿಳಿಸಿದರು. ಐದು ತಿಂಗಳ ಅವಧಿಯಲ್ಲಿ ಸಿಐಡಿ ವಿಚಾರಣೆಗೆ ಸಹ ಕರೆಯಲಾಗಿಲ್ಲ ಎಂದು ಅವರು ವಾದಿಸಿದರು.
ಇದಲ್ಲದೆ, ಸಿಐಡಿ ಚಾರ್ಜ್ಶೀಟ್ ಸಲ್ಲಿಸುವ ಸಂದರ್ಭದಲ್ಲಿ ಕೂಡ ಬೈರತಿ ಬಸವರಾಜ್ ವಿರುದ್ಧ ಸ್ಪಷ್ಟ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದು ಕೋರ್ಟ್ ಗಮನಿಸಿದೆ. ಈ ಹಿನ್ನಲೆಯಲ್ಲಿ ಬಂಧನದ ಅಗತ್ಯವಿಲ್ಲ ಎಂದು ಹೇಳಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಿಐಡಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ. ಈ ಆದೇಶದಿಂದ ಬಂಧನದ ಆತಂಕದಲ್ಲಿದ್ದ ಶಾಸಕ ಬೈರತಿ ಬಸವರಾಜ್ಗೆ ತಾತ್ಕಾಲಿಕ ನಿಟ್ಟುಸಿರು ಸಿಕ್ಕಂತಾಗಿದೆ.
































