ವಿಜಯನಗರ : ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯಲ್ಲಿ ಫ್ರಾನ್ಸ್‌ನ 52 ವರ್ಷದ ಪ್ರವಾಸಿಗರೊಬ್ಬರು ಜಾರಿ ಬಿದ್ದು ಗಾಯಗೊಂಡು ಸುಮಾರು ಎರಡು ದಿನಗಳ ಕಾಲ ಸಿಲುಕಿದ್ದ ಘಟನೆ ಬೆಳಕಿಗೆ ಬಂದಿದೆ. ಗಾಯಾಳುವನ್ನು ರಕ್ಷಿಸಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಾಯಗೊಂಡವರು ಫ್ರಾನ್ಸ್ ಮೂಲದ ಬ್ರುನೋ ರೋಜರ್ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 24ರ ಸಂಜೆ ಸುಮಾರು 6 ಗಂಟೆ ವೇಳೆಗೆ ಹಂಪಿಯ ಐತಿಹಾಸಿಕ ಅಷ್ಟಭುಜ ಸ್ನಾನಘಟಕದ ಸಮೀಪದ ಗುಡ್ಡವನ್ನು ಏರಲು ಯತ್ನಿಸುತ್ತಿದ್ದಾಗ ಕಲ್ಲುಗಳಿರುವ ಪ್ರದೇಶದಲ್ಲಿ ಜಾರಿ ಬಿದ್ದು ಕಾಲಿಗೆ ಗಂಭೀರ ಗಾಯವಾಗಿತ್ತು.
ಸಂಜೆ ಸಮಯದಲ್ಲಿ ಆ ಪ್ರದೇಶದಲ್ಲಿ ಜನಸಂಚಾರ ಕಡಿಮೆ ಇದ್ದ ಕಾರಣ, ಅವರು ಯಾರ ಗಮನಕ್ಕೂ ಬಾರದೆ ಅಲ್ಲಿಯೇ ಸಿಲುಕಿದ್ದರು. ಆಹಾರ ಮತ್ತು ನೀರಿಲ್ಲದೆ, ಗಾಯದ ನೋವಿನ ನಡುವೆಯೂ ಬದುಕುಳಿಯಲು ಪ್ರಯತ್ನಿಸಿದ ಬ್ರುನೋ, ತೆವಳುತ್ತ ಸಮೀಪದ ಬಾಳೆ ತೋಟದವರೆಗೆ ತಲುಪುವಲ್ಲಿ ಯಶಸ್ವಿಯಾದರು. ಬಾಳೆ ತೋಟದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬ್ರುನೋ ಅವರನ್ನು ಗಮನಿಸಿದ ರೈತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
ಬ್ರುನೋ ರೋಜರ್ ಅವರು ಒಂಟಿಯಾಗಿ ಭಾರತ ಪ್ರವಾಸಕ್ಕೆ ಬಂದಿದ್ದು, ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದಲ್ಲಿನ ಹೋಮ್‌ಸ್ಟೇಯಲ್ಲಿ ತಂಗಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಸಮಯದಲ್ಲೂ ಅವರು ಒಬ್ಬರೇ ಸ್ಮಾರಕಗಳ ಅನ್ವೇಷಣೆಗೆ ತೆರಳಿದ್ದರು ಎನ್ನಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಹಂಪಿಯ ಕಲ್ಲುಮಯ ಹಾಗೂ ಏಕಾಂಗಿ ಪ್ರದೇಶಗಳಲ್ಲಿ, ವಿಶೇಷವಾಗಿ ಸಂಜೆ ಸಮಯದಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
































