ಬೆಂಗಳೂರು: ಕನ್ನಡ ಹಾಗೂ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದ ನಟಿ ನಂದಿನಿ ಸಿಎಂ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಆರ್ಆರ್ ನಗರದಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಸಾವಿನ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ಅವರ ಅಕಾಲಿಕ ನಿಧನ ಕಿರುತೆರೆ ವಲಯದಲ್ಲಿ ಆಘಾತ ಮೂಡಿಸಿದೆ. ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದ ಮೂಲಕ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ದುರ್ಗಾ ಮತ್ತು ಕನಕ ಎಂಬ ಪಾತ್ರಗಳು ಅವರಿಗೆ ವಿಶಿಷ್ಟ ಪರಿಚಯ ತಂದಿದ್ದವು. ಮೂಲತಃ ಕೊಟ್ಟೂರಿನವರಾದ ನಂದಿನಿ, ವೃತ್ತಿಜೀವನದ ಕಾರಣದಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
‘ಗೌರಿ’ ಧಾರಾವಾಹಿಯಲ್ಲಿ ದ್ವಿಪಾತ್ರದ ಅವಕಾಶ ಪಡೆದು ಗಮನಸೆಳೆದಿದ್ದ ನಂದಿನಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳು ದೊರಕುವ ನಿರೀಕ್ಷೆ ಇತ್ತು. ಅವರ ನಿಧನದ ಸುದ್ದಿ ತಿಳಿದ ಕೂಡಲೇ ಸಹ ಕಲಾವಿದರು, ಅಭಿಮಾನಿಗಳು ಹಾಗೂ ಕಿರುತೆರೆ ವಲಯದವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಯಾರಿಗಾದರೂ ಮಾನಸಿಕ ಒತ್ತಡ ಅಥವಾ ತೊಂದರೆ ಅನುಭವವಾಗುತ್ತಿದ್ದರೆ, ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡುವುದು ಅಥವಾ ವೃತ್ತಿಪರರ ಸಹಾಯ ಪಡೆಯುವುದು ಮಹತ್ವದ್ದು. ಸಹಾಯ ಲಭ್ಯವಿರುತ್ತವೆ. ಕ್ಲುಲ್ಲಕ ಕಾರಣಕ್ಕೆ ಜೀವಾಂತ್ಯದ ನಿರ್ಧಾರ ಸಮಂಜಸವಲ್ಲ.

































