ಕಳೆದೊಂದು ವರ್ಷದಲ್ಲಿ ಏರುತ್ತಲೇ ಸಾಗಿ ಸಾರ್ವಕಾಲಿಕ ಏರಿಕೆ ಕಂಡಿದ್ದ ಚಿನ್ನ ಎರಡು ದಿನಗಳಿಂದ ಸತತ ಕುಸಿತ ಕಂಡಿದೆ. ದೇಶಾದ್ಯಂತ ಡಿಸೆಂಬರ್ 30ರಂದು ಚಿನ್ನದ ಬೆಲೆಗಳು ತುಸು ಇಳಿಕೆಯಾಗಿದೆ.
ಸೋಮವಾರದವರೆಗೆ ಒಂದು ತೊಲ ಚಿನ್ನ 1.42 ಲಕ್ಷ ರೂ. ದಾಟಿದ್ದರೆ, ಮಂಗಳವಾರ ಸುಮಾರು ರೂ 1,39,240ಕ್ಕೆ ಇಳಿದಿದೆ. ಅಂದರೆ ಎರಡು ದಿನಗಳಲ್ಲಿ ಹತ್ತು ಗ್ರಾಂ ಚಿನ್ನ ರೂ 2000ದಷ್ಟು ಇಳಿದಿದೆ.
ಲಾಭದ ನಗದೀಕರಣ ಅಂದರೆ ಕಳೆದ ಒಂದು ವರ್ಷದಲ್ಲಿ ಲೋಹಗಳ ಬೆಲೆ ನಿರಂತರವಾಗಿ ಏರಿಕೆಯಾಗಿದೆ. 2025ರ ಈ ಪರಿ ಏರಿಕೆಯ ನಂತರ ಹೂಡಿಕೆದಾರರು ತಮ್ಮ ಲಾಭವನ್ನು ಕಾಯ್ದಿರಿಸಿಕೊಳ್ಳಲು ಮುಂದಾಗಿದ್ದಾರೆ. 2025ರಲ್ಲಿ ಕಂಡಂತಹ ಅನಿರೀಕ್ಷಿತ ಏರಿಕೆಯನ್ನು 2026ರಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಹೂಡಿಕೆದಾರರ ಮನಸ್ಥಿತಿಯಾಗಿದೆ. ಹೀಗಾಗಿ ಹೂಡಿಕೆದಾರರು ಗರಿಷ್ಠ ಬೆಲೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಗ್ಗುತ್ತಿರುವ ಯುದ್ಧದ ಭೀತಿ ಮತ್ತು ಮಾರ್ಜಿನ್ ನಿಯಮಗಳ ಬದಲಾವಣೆಯೇ ಈ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಫ್ಲೋರಿಡಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಶ್ಯ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಶಾಂತಿ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಉಭಯ ನಾಯಕರು ಹೇಳಿದ್ದಾರೆ. ಯುದ್ಧದ ಭೀತಿ ಕಡಿಮೆಯಾಗುತ್ತಿದ್ದಂತೆ, ಸುರಕ್ಷಿತ ಹೂಡಿಕೆ ತಾಣವಾಗಿದ್ದ ಚಿನ್ನದ ಮೇಲಿನ ಆಕರ್ಷಣೆ ಕಡಿಮೆಯಾಗಿದೆ.
ಅಮೆರಿಕದ ಪ್ರಮುಖ ಡೆರಿವೇಟಿವ್ಸ್ ಎಕ್ಸ್‌ಚೇಂಜ್ ಆದ ಸಿಎಂಇ ಗ್ರೂಪ್, ಬೆಳ್ಳಿ ಒಪ್ಪಂದಗಳ ಮೇಲಿನ ಆರಂಭಿಕ ಮಾರ್ಜಿನ್ ಅನ್ನು 20,000ದಿಂದ 25,000 ಡಾಲರ್‌ಗೆ ಹೆಚ್ಚಿಸಿದೆ. ಡಿಸೆಂಬರ್ 26ರಂದು ಈ ನಿಯಮ ಘೋಷಣೆಯಾಗಿದ್ದು, ಹೂಡಿಕೆದಾರರು ತಮ್ಮ ಖಾತೆಯಲ್ಲಿ ಹೆಚ್ಚಿನ ಹಣವನ್ನು ಇಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಣ ಹೊಂದಿಸಲಾಗದ ಹೂಡಿಕೆದಾರರ ಪೊಸಿಷನ್‌ಗಳು ಲಿಕ್ವಿಡೇಟ್ ಆಗುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು (ಬೆಳಿಗ್ಗೆ)?
ಮಂಗಳವಾರ ಡಿಸೆಂಬರ್ 30ರಂದು ಬೆಳಗ್ಗೆ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,620 (-305) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,485 (-280) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,193 (-251) ರೂ. ಬೆಲೆಗೆ ತಲುಪಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ದರ
ಹೈದರಾಬಾದ್: 24 ಕ್ಯಾರೆಟ್ 1,39,240 ರೂ., 22 ಕ್ಯಾರೆಟ್ 1,27,640 ರೂ.
ದಿಲ್ಲಿಯಲ್ಲಿ 24 ಕ್ಯಾರೆಟ್ 1,39,390 ರೂ., 22 ಕ್ಯಾರೆಟ್ 1,27,790 ರೂ.
ಮುಂಬೈನಲ್ಲಿ 24 ಕ್ಯಾರೆಟ್ 1,39,240 ರೂ., 22 ಕ್ಯಾರೆಟ್ 1,27,640 ರೂ.
ಬೆಂಗಳೂರಿನಲ್ಲಿ 24 ಕ್ಯಾರೆಟ್ 1,39,240 ರೂ., 22 ಕ್ಯಾರೆಟ್ 1,27,640 ರೂ.

































