ಬಿಹಾರ: ಸಾಮಾಜಿಕ ವಿರೋಧ ಮತ್ತು ಆರ್ಥಿಕ ಮಿತಿಗಳನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದ ಬಿಹಾರದ ಸಣ್ಣ ಹಳ್ಳಿಯ ಪ್ರಿಯಾ ರಾಣಿ ಅವರ ಸ್ಫೂರ್ತಿದಾಯಕ ಕತೆ ಇದು.
ಫುಲ್ವಾರಿ ಶರೀಫ್ನ ಕುರ್ಕುರಿ ಗ್ರಾಮದ ನಿವಾಸಿಯಾದ ಪ್ರಿಯಾಗೆ ಚಿಕ್ಕ ವಯಸ್ಸಿನಿಂದಲೇ ಶಾಲಾ ಶಿಕ್ಷಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ರೈತರಾಗಿರುವ ಅವರ ತಂದೆ ಅಭಯ್ ಕುಮಾರ್ ಮತ್ತು ಅಜ್ಜ ಸುರೇಂದ್ರ ಪ್ರಸಾದ್ ಶರ್ಮಾ ಅವರು ಪ್ರಿಯಾಳ ಆಕಾಂಕ್ಷೆಗೆ ಬೆನ್ನೆಲುಬಾಗಿ ನಿಂತರು.
ಪ್ರಿಯಾ ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅವರ ಕುಟುಂಬವು ಪಾಟ್ನಾಕ್ಕೆ ಸ್ಥಳಾಂತರಗೊಂಡಿತು. ಪ್ರಿಯಾ ಅವರು ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಸೇಂಟ್ ಮೈಕಲ್ಸ್ ಶಾಲೆಯಲ್ಲಿ 12ನೇ ತರಗತಿಯನ್ನು ಪೂರೈಸಿದರು. ಬಳಿಕ ಬಿಐಟಿ ಮೆಸ್ರಾದಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಪದವಿ ಪಡೆದರು.
ಇಂಜಿನಿಯರಿಂಗ್ ಮುಗಿಸಿದ ತಕ್ಷಣ ಪ್ರಿಯಾ ಅವರಿಗೆ ಬೆಂಗಳೂರಿನಲ್ಲಿ ಉತ್ತಮ ಸಂಬಳದ ಕೆಲಸ ದೊರೆಯಿತು. ಆದರೆ ಅವರ ಗುರಿ ಮಾತ್ರ ಬೇರೆಯೇ ಆಗಿತ್ತು. ಯುಪಿಎಸ್ಸಿ ಬರೆಯಬೇಕೆಂಬ ಹಂಬಲದಿಂದ ಅವರು ಕೆಲಸವನ್ನು ಬಿಟ್ಟು ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿದರು.
ಪ್ರಿಯಾ ಅವರ ಪರಿಶ್ರಮಕ್ಕೆ ಶೀಘ್ರದಲ್ಲೇ ಫಲ ಸಿಕ್ಕಿತು. 2021ರಲ್ಲಿ ಅಖಿಲ ಭಾರತ 284ನೇ ರ್ಯಾಂಕ್ ಪಡೆಯುವ ಮೂಲಕ ಅವರು ಐಡಿಎಸ್ಗೆ ಆಯ್ಕೆಯಾದರು. ಆದರೂ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲವಿದ್ದ ಅವರು ಸತತವಾಗಿ ಪ್ರಯತ್ನಿಸಿದರು. 2023ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 69ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಗುರಿಯನ್ನು ಸಾಧಿಸಿದರು. ಪ್ರಸ್ತುತ ಅವರು ಪೂರ್ವ ಚಂಪಾರಣ್ನಲ್ಲಿ ಸಹಾಯಕ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

































