ಡೆಹ್ರಾಡೂನ್ : ಎರಡು ಲೋಕೋ ರೈಲುಗಳು ಸುರಂಗದೊಳಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 65 ಕಾರ್ಮಿಕರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಪ್ರದೇಶದ ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ನಿನ್ನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
4.5 ಕಿಮೀ ಉದ್ದದ ಸುರಂಗದೊಳಗೆ ರಾತ್ರಿ 8.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರ್ಮಿಕರು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಒಂದು ಲೋಕೋ ರೈಲು, ಶಿಫ್ಟ್ ಬದಲಾವಣೆಯ ಸಮಯದಲ್ಲಿ ಅದೇ ಹಳಿಯಲ್ಲಿ ನಿಂತಿದ್ದ ಮತ್ತೊಂದು ಲೋಕೋ ರೈಲಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ವೇಳೆ ಸುಮಾರು 108 ಕಾರ್ಮಿಕರು ಎರಡು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಗಾಯಗೊಂಡ ಎಲ್ಲಾ ಕಾರ್ಮಿಕರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಆರೈಕೆ ಮತ್ತು ಯಾವುದೇ ಸಾವುನೋವುಗಳು ಸಂಭವಿಸದಂತೆ ನೋಡಿಕೊಳ್ಳುವುದರ ಮೇಲೆ ತಕ್ಷಣ ಗಮನಹರಿಸಲಾಗಿದೆ. ಎರಡೂ ರೈಲುಗಳು ಸುರಂಗದೊಳಗೆ ಒಂದೇ ಹಳಿಗೆ ಹೇಗೆ ಬಂದವು ಎಂಬುದನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.

































