ನವದೆಹಲಿ : ಹೊಸ ವರ್ಷದ ಮೊದಲ ದಿನವೇ ಎಲ್ಪಿಜಿ ಬಳಕೆದಾರರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಈ ಬಾರಿ ಕೇಂದ್ರ ಸರ್ಕಾರವು 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದೆ.
ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಎಲ್ಪಿಜಿ ಸಿಲಿಂಡರ್ ಮೊದಲು ರೂ.1580.50ಕ್ಕೆ ಲಭ್ಯವಾಗುತ್ತಿದ್ದರೆ, ಈಗ ರೂ.1691.50ಕ್ಕೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಬೆಲೆ ರೂ.1795ಕ್ಕೆ ಏರಿದ್ದು, ರೂ.111 ರಷ್ಟು ಹೆಚ್ಚಳವಾಗಿದೆ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ತಕ್ಕಂತೆ ರೂ.1849.50 ಮತ್ತು ರೂ.1700 ರುಪಾಯಿಗಳಲ್ಲಿ ಸಿಲಿಂಡರ್ ಲಭ್ಯವಾಗಲಿದೆ.
ಆದಾಗ್ಯೂ, ಗೃಹ ಬಳಕೆದಾರರ 14 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ ರೂ.853, ಮುಂಬೈನಲ್ಲಿ ರೂ.852.50, ಬೆಂಗಳೂರಿನಲ್ಲಿ ರೂ.855.50 ರಷ್ಟು ಬೆಲೆಯಲ್ಲಿಯೇ ಸಿಲಿಂಡರ್ ಲಭ್ಯವಾಗಲಿದೆ. 2025ರಲ್ಲಿ ವಾಣಿಜ್ಯ ಬಳಕೆ 19 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಹಲವು ಬಾರಿ ಇಳಿಕೆ ಕಂಡುಬಂದಿದ್ದರೂ, ಹೊಸ ವರ್ಷದಲ್ಲಿಯೇ ಹೆಚ್ಚಳ ನಡೆದಿರುವುದು ಜನರಿಗೆ ಆಶ್ಚರ್ಯವಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವು ವಾಣಿಜ್ಯ ಬಳಕೆದಾರರಿಗೆ ನೇರ ಪ್ರಭಾವ ಬೀರುತ್ತಿದ್ದು, ಉದ್ಯಮಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚಿನ ಖರ್ಚು ಎದುರಿಸಬೇಕಾಗುತ್ತದೆ. ಇಂಧನ ದರಗಳ ಮೇಲಿನ ನಿಯಂತ್ರಣ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಮುಂದಿನ ತಿಂಗಳೂ ಸರ್ಕಾರ ದರ ಪರಿಷ್ಕರಣೆ ನಡೆಸಲಿದೆ ಎಂದು ತಜ್ಞರು ಹೇಳಿದ್ದಾರೆ.

































