ಚಿತ್ರದುರ್ಗ : ಜಿಲ್ಲೆ ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಗೆ ನೀಡಿರುವ ಕೊಡುಗೆ ಅಪಾರವಾದುದು. ನೂರಾರು ಕಲಾವಿದರು ಇಲ್ಲಿಂದ ಹೋಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ ಎಂದು ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಅಜಯ್ ಕುಮಾರ್ ಅಭಿಪ್ರಾಯ ಪಟ್ಟರು.
ನಗರದ ವಾಸವಿ ವಿದ್ಯಾ ಸಂಸ್ಥೆ ಒಳಾಂಗಣ ಆವರಣದಲ್ಲಿ ನಡೆದ ಯಕ್ಷರಂಗಾಯಣ ಕಾರ್ಕಳ ಪ್ರಸ್ತುತ ಪಡಿಸಿದ ರಂಗಪಯಣ ಮೊದಲ ದಿನದ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಚಲನಚಿತ್ರ ನಟರಾದ ದತ್ತಾತ್ರೇಯ ಎಚ್ ಜಿ (ದತ್ತಣ್ಣ) ತಮ್ಮ ವಿದ್ಯಾರ್ಥಿದೆಸೆಯಲ್ಲಿ ಇದೇ ವಾಸವಿ ವೇದಿಕೆಯಲ್ಲಿ ಅಭಿನಯ ಪ್ರವೃತ್ತಿಗೆ ಶ್ರೀಕಾರ ಹಾಡಿದರು ಎಂಬ ಹೆಗ್ಗಳಿಕೆ ಸಂಸ್ಥೆಯದು. ಅವರೂ ಸಹ ಅದೇ ಅಭಿಮಾನ ಚಿತ್ರದುರ್ಗ ನಗರ ಹಾಗೂ ವಿದ್ಯಾಸಂಸ್ಥೆಯ ಮೇಲೆ ಇಂದಿಗೂ ಇರಿಸಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ತರಾಸು, ಟಿ.ಎಸ್. ವೆಂಕಣ್ಣಯ್ಯ ಹಾಗೂ ದುಮ್ಮಿ ಮುರಿಗೆಪ್ಪ ಇತರ ಖ್ಯಾತನಾಮರನ್ನು ಸ್ಮರಿಸಿದರು. ವಿಮರ್ಶಕರಾದ ಡಾ. ತಾರಿಣಿ ಶುಭದಾಯಿನಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ಡಿ ಬಸವರಾಜ್, ಡಾ. ರಾಜೀವಲೋಚನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಗುರುನಾಥ್ ಮತ್ತು ಕಾರ್ಯಕ್ರಮದ ಆಯೋಜಕರಾದ ದೀವಿಗೆ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಸದಸ್ಯರುಗಳಾದ ಎಂ ವಿ ನಟರಾಜ, ಎಂ.ವಿ ನಾಗರಾಜ ಉಪಸ್ಥಿತರಿದ್ದರು
ಮೊದಲ ದಿನದ ಪ್ರದರ್ಶನದಲ್ಲಿ ಈಜಿಪ್ಟ್ ನ ಲೇಖಕ ತೌಫಿಕ್ ಅಲ್ ಹಕೀಮ್ ಅವರ ಗುಲಾಮನ ಸ್ವಾತಂತ್ರ್ಯ ಯಾತ್ರೆ ಎಂಬ ನಾಟಕ ಪ್ರದರ್ಶನಗೊಂಡಿತು. ಎಂ ಎಸ್ ಕೆ ಪ್ರಭು ಇದನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ಬಿ ಆರ್ ವೆಂಕಟರಮಣ ಐತಾಳ್ ರ ನಿರ್ದೇಶನದ ಈ ನಾಟಕಕ್ಕೆ ಸಂಗೀತ ನೀಡಿದರು ಭಿನ್ನಷಡ್ಜ. ನಾಟಕದ ಕಥಾವಸ್ತು: ಅಧಿಕಾರದ ಉತ್ತುಂಗದಲ್ಲಿರುವ ಒಬ್ಬ ಮಾಮ್ಲುಕ್ ಸುಲ್ತಾನನಿಗೆ ತಾನು ಗುಲಾಮಗಿರಿಯಿಂದ ವಿಮೋಚನೆಗೊಂಡಿಲ್ಲ ಎಂಬ ಸತ್ಯ ತಿಳಿಯುತ್ತದೆ. ಕಾನೂನಿನ ಪ್ರಕಾರ ಗುಲಾಮನಾಗಿರುವ ವ್ಯಕ್ತಿ ದೇಶ ಆಳಲು ಅರ್ಹನಲ್ಲ. ಕತ್ತಿಯ ಬಲವನ್ನು ಬಳಸಿಕೊಂಡು ತನ್ನ ಆಳ್ವಿಕೆಯನ್ನು ಹಿಂಸೆಯೊಂದಿಗೆ ಮುಂದುವರೆಸಬೇಕೇ ಅಥವಾ ಕಾನೂನುಬದ್ಧ ಆಡಳಿತಕ್ಕಾಗಿ ಅದು ಹೇಳುವಂತೆ ಮೊದಲು ತನ್ನನ್ನು ಸಾರ್ವಜನಿಕವಾಗಿ ಹರಾಜು ಹಾಕಿಸಿಕೊಂಡು, ಅವರಿಂದ ವಿಮೋಚನೆಗೊಂಡು ನಂತರ ಮತ್ತೆ ಸಿಂಹಾಸನ ಏರಬೇಕೆ ಎಂಬ ದ್ವಂದ್ವಕ್ಕೆ ಸುಲ್ತಾನನು ಒಳಗಾಗುತ್ತಾನೆ. ಸ್ವತಂತ್ರನಾಗಲು ಅವನು ತನ್ನನ್ನು ಸಾರ್ವಜನಿಕವಾಗಿ ಹರಾಜು ಹಾಕಿಸಿಕೊಳ್ಳುತ್ತಾನೆ. ಹರಾಜಿನಲ್ಲಿ ಗೆಲ್ಲುವ ಸುಂದರ ಮಹಿಳೆಯಾದ ಒಬ್ಬಾಕೆ ಗಣಿಕೆಯ ಮನೆಯಲ್ಲಿ ಆತ ಒಂದು ರಾತ್ರಿ ಕಳೆಯುತ್ತಾನೆ. ಅವಳೊಂದಿಗಿನ ಮಾತುಕತೆಯಲ್ಲಿ ಇಬ್ಬರೂ ಪರಸ್ಪರ ಅರ್ಥೈಸಿಕೊಳ್ಳುವಾಗ ಮನುಷ್ಯತ್ವದ ನೆಲೆಯಲ್ಲಿ ಬಿಡುಗಡೆ ಹೊಂದುತ್ತಾನೆ. ಕಾನೂನು, ಅಧಿಕಾರ ಮತ್ತು ನ್ಯಾಯದ ನಡುವಿನ ಸಂಕೀರ್ಣ ಸಂಬಂಧವನ್ನು ಹಾಗೂ ಮನುಷ್ಯತ್ವವೇ ಬಿಡುಗಡೆಯ ಮುಖ್ಯ ಮಾರ್ಗ ಎಂಬುದನ್ನು ಪರಿಣಾಮಕಾರಿಯಾಗಿ ಈ ನಾಟಕ ತಿಳಿಸುತ್ತದೆ.
ಈ ನಾಟಕವು ಸರಕಾರ, ಅಧಕಾರಿ ವರ್ಗ, ಕಾನೂನು ಪಾಲಕಾರು ಹಾಗೂ ಸಾಮಾನ್ಯ ಜನರ ಮೇಲಾಟವನ್ನ ಸಶಕ್ತವಾಗಿ ಬಿಂಬಿಸುತ್ತದೆ. ಕಾನೂನಿನ ಮುಂದೆ ಆಳುವವರು ಮತ್ತು ಆಳುಗಳೂ ಒಂದೇ ಎಂಬ ಹೇಳಿಕೆಯನ್ನು ಸಮಸ್ಯಾತ್ಮಕಗೊಳಿಸುತ್ತಲೇ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. ಕುಟಿಲೋಪಾಯದ ಮೂಲಕ ರಾತ್ರಿ ಹಗಲುಗಳನ್ನು ನಿಬ್ಬೆರಗಾಗಿಸುವ ಸುಲ್ತಾನನ ಆಪ್ತ ವಲಯ ಕಾನೂನನ್ನೇ ಬೆಚ್ಚಿಸುತ್ತದೆ.

































