ಬೆಂಗಳೂರು: ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್ಗಳಲ್ಲಿ ಸಂಭವಿಸುತ್ತಿರುವ ಅಗ್ನಿ ದುರಂತಗಳಿಂದ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಫುಲ್ ಅಲರ್ಟ್ ಆಗಿದ್ದು, ತನ್ನ ಬಸ್ಗಳಲ್ಲಿ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲು ಮುಂದಾಗಿದೆ.
ಮೊದಲ ಹಂತದಲ್ಲಿ ಕೆಎಸ್ಆರ್ಟಿಸಿ ಅಂಬಾರಿ ಉತ್ಸವ ಹಾಗೂ ಅಂಬಾರಿ 2.0 ಎಸಿ ಸ್ಲೀಪರ್ ಬಸ್ಗಳಲ್ಲಿ ಆಧುನಿಕ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್ಗಳಲ್ಲಿ ಚಾಲಕರ ಸುರಕ್ಷತೆ ಮತ್ತು ಪ್ರಯಾಣಿಕರ ರಕ್ಷಣೆಗೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಚಾಲಕರ ಸೀಟ್ ಬಳಿ ಡ್ಯಾಶ್ ಕ್ಯಾಮ್ ಅಳವಡಿಸಲಾಗಿದ್ದು, ಅಪಘಾತ ಸಂಭವಿಸಿದರೆ ಕಾರಣ ಪತ್ತೆಗೆ ಇದು ಸಹಕಾರಿಯಾಗಲಿದೆ.
ಬಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದರೆ ತಕ್ಷಣ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಚಾಲಕರ ಮುಂಭಾಗದಲ್ಲಿ ಅನೌನ್ಸರ್ ವ್ಯವಸ್ಥೆ ಅಳವಡಿಸಲಾಗಿದೆ. ಇನ್ನು ಇಂಜಿನ್ ಕಂಪಾರ್ಟ್ಮೆಂಟ್ನಲ್ಲಿ ಫೈರ್ ಡಿಟೆಕ್ಷನ್ ಅಂಡ್ ಸಪ್ರೆಷನ್ ಸಿಸ್ಟಮ್ (FDSS) ಅಳವಡಿಸಲಾಗಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ 15 ನಾಜಲ್ಗಳಿಂದ ಸ್ವಯಂಚಾಲಿತವಾಗಿ ಫೋಮ್ ಸ್ಪ್ರೇ ಆಗಿ ಅಗ್ನಿ ನಂದಿಸುವ ವ್ಯವಸ್ಥೆ ಇದೆ.
ಸ್ವಯಂಚಾಲಿತ ವ್ಯವಸ್ಥೆ ಕಾರ್ಯನಿರ್ವಹಿಸದಿದ್ದರೆ, ಚಾಲಕರ ಮುಂದೆ ಇರುವ ಡಿಸ್ಪ್ಲೇಯಲ್ಲಿನ ಬಟನ್ ಒತ್ತುವ ಮೂಲಕ ಕೈಯಾರೆ ಫೋಮ್ ಸ್ಪ್ರೇ ಮಾಡಬಹುದಾಗಿದೆ. ಇದಕ್ಕಾಗಿ ಬಸ್ ಹಿಂಭಾಗದಲ್ಲಿ 4 ಕೆಜಿ ಸಾಮರ್ಥ್ಯದ ಫೋಮ್ ಸಿಲಿಂಡರ್ ಅಳವಡಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಗಾಜು ಒಡೆದು ಹೊರಬರಲು ಚಾಲಕರ ಸೀಟ್ ಹಿಂಭಾಗದಲ್ಲಿ ದೊಡ್ಡ ಹ್ಯಾಮರ್ ಹಾಗೂ ಪ್ರತಿ ಬರ್ತ್ ಸೀಟ್ ಬಳಿಯೂ ಕಿಟಕಿ ಗಾಜು ಒಡೆಯುವ ಹ್ಯಾಮರ್ ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆ ಉಂಟಾದಾಗ ಪ್ರಯಾಣಿಕರಿಗೆ ತಕ್ಷಣ ಎಚ್ಚರಿಕೆ ನೀಡಲು ಪ್ಯಾನಿಕ್ ಬಟನ್ ಕೂಡ ಅಳವಡಿಸಲಾಗಿದೆ. ಬಸ್ ಒಳಭಾಗದ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು 4 ಕೆಜಿ ಫೈರ್ ಎಕ್ಸ್ಟಿಂಗ್ವಿಷರ್ಗಳನ್ನೂ ಒದಗಿಸಲಾಗಿದೆ.
ಇದೇ ವೇಳೆ, ಬಸ್ ಬಲಭಾಗದ ಮೂರನೇ ಬರ್ತ್ನಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಅಳವಡಿಸಲಾಗಿದ್ದು, ಈ ಬರ್ತ್ ಅನ್ನು ಯಾರಿಗೂ ಬುಕ್ ಮಾಡುವುದಿಲ್ಲ. ಇದು ಸದಾ ಖಾಲಿಯಾಗಿರಲಿದೆ. ಬಸ್ ಒಳಭಾಗದಲ್ಲಿ ಎರಡು ಸೆಲೂನ್ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಅತ್ಯಾಧುನಿಕ ADAS (Advanced Driver Assistance System) ಅಳವಡಿಸಲಾಗುತ್ತಿದೆ. ಈ ವ್ಯವಸ್ಥೆ ಚಾಲನೆ ವೇಳೆ ಚಾಲಕ ಮೊಬೈಲ್ ಬಳಸಿದರೆ, ನಿದ್ರೆಗೆ ಜಾರಿದರೆ ಅಥವಾ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣ ಎಚ್ಚರಿಕೆ ನೀಡುತ್ತದೆ. ಮೊದಲಿಗೆ ಬೀಪ್ ಸೌಂಡ್, ನಂತರ ಕ್ರಿಟಿಕಲ್ ವಾರ್ನಿಂಗ್ ನೀಡಲಾಗುತ್ತದೆ. ಅಗತ್ಯವಿದ್ದರೆ ವಾಹನದ ವೇಗವನ್ನು ಕಡಿಮೆ ಮಾಡಿ ಅಪಘಾತ ತಪ್ಪಿಸಲು ಸಹಕಾರಿಯಾಗುತ್ತದೆ. ಅಲ್ಲದೆ, ಚಾಲಕ ಮದ್ಯಪಾನ ಮಾಡಿ ಬಂದಿದ್ದರೆ ಬಸ್ ಸ್ಟಾರ್ಟ್ ಆಗುವುದೇ ಇಲ್ಲ.
ಐರಾವತ ಬಸ್ಗಳಲ್ಲಿ ಪ್ರಯಾಣಿಕರ ಸೀಟ್ ಬಳಿ 30 ಸ್ಪ್ರಿಂಕ್ಲರ್ ನಾಜಲ್ಗಳನ್ನು ಅಳವಡಿಸಲಾಗಿದ್ದು, ಅಗ್ನಿ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ನೀರು ಸ್ಪ್ರೇ ಆಗಲಿದೆ. ಇದಕ್ಕಾಗಿ ಲಗೇಜ್ ಕಂಪಾರ್ಟ್ಮೆಂಟ್ ಬಳಿ 170 ಲೀಟರ್ ಸಾಮರ್ಥ್ಯದ ಎರಡು ಸ್ಟೇನ್ಲೆಸ್ ಸ್ಟೀಲ್ ಟ್ಯಾಂಕ್ಗಳನ್ನು ಅಳವಡಿಸಲಾಗಿದೆ.
ಬಸ್ ಬಲಭಾಗದ ಹಿಂಬದಿಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಮತ್ತು ಸ್ಟೀಲ್ ಲ್ಯಾಡರ್ ವ್ಯವಸ್ಥೆ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗೆ ಇಳಿಯಲು ಅನುಕೂಲವಾಗುತ್ತದೆ ಎಂದು ಕೆಎಸ್ಆರ್ಟಿಸಿ ಡಿ.ಸಿ ನಾಗರಾಜ್ ಮೂರ್ತಿ ತಿಳಿಸಿದ್ದಾರೆ.
ಒಟ್ಟಾರೆ, ನೈಟ್ ಸರ್ವಿಸ್ ಖಾಸಗಿ ಬಸ್ಗಳಲ್ಲಿ ಸಂಭವಿಸುತ್ತಿರುವ ಅಗ್ನಿ ದುರಂತಗಳ ಬೆನ್ನಲ್ಲೇ ಕೆಎಸ್ಆರ್ಟಿಸಿ ಕೈಗೊಂಡಿರುವ ಈ ಮುಂಜಾಗ್ರತಾ ಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೊಸ ಮಾನದಂಡ ಸ್ಥಾಪಿಸುವತ್ತ ನಿಗಮ ಹೆಜ್ಜೆ ಇಟ್ಟಿದೆ.































