ಬೆಂಗಳೂರು: ರಾಜ್ಯದ ಎಲ್ಲಾ ಹಿಂದುಳಿದ ಜಾತಿ ಸಂಘಗಳಿಗೂ ಸರ್ಕಾರದಿಂದ ಉಚಿತವಾಗಿ ಜಮೀನು ನೀಡಲು ಚಿಂತನೆ ನಡೆಸಲಾಗಿದೆ. ಕನಿಷ್ಠ 2.5 ಎಕರೆ ಜಮೀನು ನೀಡುವ ಬಗ್ಗೆ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದೇವಾಂಗ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ಜಾತಿ ಸಂಘಟನೆಗಳಿಗೆ ತಲಾ ಕನಿಷ್ಠ ಎರಡಿಂದ ಎರಡೂವರೆ ಎಕರೆ ಜಮೀನು ನೀಡಲು ಅವಕಾಶವಿದೆ. ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ದೇವಾಂಗ ಸಮಾಜ ಸಂಘಟನೆ ಸೇರಿ ಎಲ್ಲಾ ಹಿಂದುಳಿದ ಜಾತಿ ಸಂಘಟನೆಗಳಿಗೆ ಸರ್ಕಾರದಿಂದ ಉಚಿತವಾಗಿ ಜಮೀನು ನೀಡಲಾಗುವುದು. ದೇವಾಂಗ ಸಮುದಾಯದ ಬೇಡಿಕೆಯಂತೆ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ದೇವಾಂಗ ಸಮುದಾಯದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘವು ನೂರು ವರ್ಷಗಳನ್ನು ಪೂರೈಸುವುದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಸಂಘವು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯ ವ್ಯವಸ್ಥೆ ಒದಗಿಸಲಾಗುತ್ತಿರುವುದು ಸಂತಸದ ವಿಚಾರ ಎಂದರು.
ಮಹಿಳೆಯರು ಹಾಗೂ ಶೋಷಿತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಪ್ರಸ್ತುತ ಲಿಂಗ ತಾರತಮ್ಯ ನೀಗುತ್ತಿದ್ದು, ದೇವಾಂಗ ಸಂಘವು ಮಹಿಳಾ ಸಬಲೀಕರಣಕ್ಕೆ ನೆರವು ನೀಡುತ್ತಿದೆ. ಮಹಿಳಾ ವಸತಿನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಮಾಡುತ್ತೇವೆ ಎಂದರು.
ದೇವರದಾಸಿಮಯ್ಯ ಅವರ ಜಯಂತಿಯನ್ನು ಪ್ರಾರಂಭಿಸಿದ್ದು ನಮ್ಮ ಸರ್ಕಾರ. ಸಮುದಾಯದ ಜನಪ್ರತಿನಿಧಿಗಳು ಹಲವರು ಶಾಸಕರು ಮತ್ತು ಎಂಎಲ್ ಸಿ ಗಳಾಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಜಮೀನು ನೀಡುವ ಚಿಂತನೆಯನ್ನು ಸರ್ಕಾರ ಹೊಂದಿದೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆಯಿದ್ದು, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು


































