ಬೆಂಗಳೂರು: ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬೆಂಗಳೂರಿನ ಚಾಮರಾಜಪೇಟೆ ಸಮೀಪದ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.
ಜೆಜೆ ನಗರದ ವಿಎಸ್ ಗಾರ್ಡನ್ ಓಂ ಶಕ್ತಿ ದೇವಾಲಯದ ಬಳಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವರದರಾಜು ಎಂಬುವರ ಅಪ್ರಾಪ್ತ ಪುತ್ರಿಯ ತಲೆಗೆ ಗಂಭೀರ ಗಾಯವಾಗಿದೆ. ಮತ್ತೊಬ್ಬ ಬಾಲಕಿ ಹಾಗೂ ಮಹಿಳೆಗೂ ಗಾಯಗಳಾಗಿವೆ ಎನ್ನಲಾಗಿದ್ದು, ಮಾಹಿತಿ ತಿಳಿದ ಜೆಜೆ ನಗರ ಠಾಣೆ ಪೊಲೀಸರು ಮತ್ತು ಎಸಿಪಿ ಭರತ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಓಂಶಕ್ತಿ ಮಾಲಾಧಾರಿಗಳು ಹಾಗೂ ಸ್ಥಳೀಯರು ಜೆಜೆ ನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.


































