ಚಿತ್ರದುರ್ಗ: ಈ ಬಾರಿಯ ತುರುವನೂರು ಮಾರಿ ಜಾತ್ರೆಯಲ್ಲಿ ಬೆತ್ತೆಲ ಸೇವೆ, ಅಸ್ಪೃಶ್ಯತೆ ಆಚರಣೆ, ಒತ್ತಾಯಪೂರ್ವಕವಾಗಿ ದಲಿತ ಸಮುದಾಯದಿಂದ ದಷ್ಟ ಆಚರಣೆ ಮಾಡಿಸುವುದಕ್ಕೆ ತಡೆ ಒಡ್ಡಲಾಗಿದೆ ಎಂದು ಚಿತ್ರದುರ್ಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ನಿರೀಕ್ಷಕರಾದ ಜಯಪ್ಪ ನಾಯಕ ಬಿ.ಎಲ್. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜ.6 ರಿಂದ ಪ್ರಾರಂಭವಾದ ತುರವನೂರು ಮಾರಿ ಜಾತ್ರೆಯು ಜ.8 ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಜ.2 ರಂದು ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಗೋವಿಂದರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.
ಮಾರಿ ಜಾತ್ರೆಯಲ್ಲಿ ದಲಿತ ಸಮುದಾಯದಿಂದ ದುಷ್ಟಪದ್ದತಿಗಳಾದ ಬೆತ್ತಲೆಸೇವೆ, ಪ್ರಾಣಿಬಲಿ, ಪ್ರತಿ ಬೀದಿಗಳಲ್ಲಿ ಸರಗ ಚಲ್ಲಲು ಒತ್ತಾಯಿಸಿರುವ ಕುರಿತು ದೂರುಗಳು ಕೇಳಿ ಬಂದಿದ್ದವು. ಕರ್ನಾಟಕ ಸಾಮಾಜಿಕ ಮೌಢ್ಯ ನಿಷೇಧ ಕಾಯ್ದೆ-2025 ಪ್ರಕಾರ ಬೆತ್ತಲೆ ಸೇವೆ, ಮಡೆಸ್ನಾನ, ಮಾಟಮಂತ್ರ, ಬರಬಳಿ, ಬೆತ್ತಲೆಸೇವೆ, ಮೈಲಿಗೆ ನೆಪದಲ್ಲಿ ಬಹಿಷ್ಕಾರ ಮಾಡುವುದು ಅಪರಾಧಗಳಾಗಿವೆ. ಗ್ರಾಮಸ್ಥರು ಈ ಅನಿಷ್ಠ ಪದ್ದತಿಗಳನ್ನು ಬಿಟ್ಟು ಸೌಹಾರ್ಧಯುತವಾಗಿ ಜಾತ್ರಾ ಮಹೋತ್ಸವ ನಡೆಸಬೇಕು. ಕಾನೂನು ಬಾಹಿರವಾಗಿ ಸಾಮಾಜಿಕ ಅನಿಷ್ಠ ಪದ್ದತಿಗಳನ್ನು ನಡೆಸುವಂತೆ ತಳ ಸಮುದಾಯದವರಿಗೆ ಒತ್ತಾಯಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ನಿರೀಕ್ಷಕ ಜಯಪ್ಪ ನಾಯಕ.ಬಿ.ಎಲ್ ತಿಳಿಸಿದ್ದಾರೆ.
3 ದಿನ ಪೊಲೀಸ್ ಕಣ್ಗಾವಲು:
ತುರುವನೂರು ಜಾತ್ರೆಯ ನಡೆಯುವ 3 ದಿನಗಳು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ವತಿಯಿಂದ ಕಣ್ಗಾವಲು ಇರಿಸಲಾಗಿದೆ. ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಕಾನ್ಸೇಟಬಲ್‌ಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಯಾವುದೇ ಮೌಢ್ಯಾಚರಣೆಗಳು ನಡೆಯದಂತೆ ತಡೆ ಒಡ್ಡಿದ್ದಾರೆ.

































