ಚಂಡೀಗಢ: ನಿತ್ಯ 14 ಗಂಟೆಗಳ ಸುದೀರ್ಘ ಉದ್ಯೋಗದ ಮಧ್ಯೆಯೂ ಪರೀಕ್ಷೆಗೆ ತಯಾರಿ ನಡೆಸಿ, ಮೊದಲ ಪ್ರಯತ್ನದಲ್ಲೇ UPSC ಅಲ್ಲಿ ಅಕ್ಷಿತಾ ಯಶಸ್ವಿಯಾಗಿದ್ದಾರೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ.
ಬಹುತೇಕರು ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ನಿರಂತರ ಅಧ್ಯಯನ , ಕೋಚಿಂಗ್ ಪಡೆಯುತ್ತಾರೆ. ಆದರೆ ಐಎಎಸ್ ಅಧಿಕಾರಿ ಅಕ್ಷಿತಾ ಗುಪ್ತಾ ಉದ್ಯೋಗ ಮಾಡಿಕೊಂಡೇ UPSCಯಲ್ಲಿ 69ನೇ ರ್‍ಯಾಂಕ್ ಪಡೆದಿದ್ದಾರೆ.
ಚಂಡೀಗಢದಲ್ಲಿ ಜನಿಸಿದ ಡಾ. ಅಕ್ಷಿತಾ ಗುಪ್ತಾ ಅವರ ತಂದೆ ಪವನ್ ಗುಪ್ತಾ ಅವರು ಪಂಚಕುಲದ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಅವರ ತಾಯಿ ಮೀನಾ ಗುಪ್ತಾ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಗಣಿತ ಉಪನ್ಯಾಸಕಿ. ಅಕ್ಷಿತಾ ಗುಪ್ತಾ ಐಎಎಸ್ ಆಗುವ ಮೊದಲು ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿದ್ದರು. ಆಸ್ಪತ್ರೆಯಲ್ಲಿ 14 ಗಂಟೆಗಳ ಕರ್ತವ್ಯದೊಂದಿಗೆ ಅವರು UPSC ಗೆ ತಯಾರಿ ನಡೆಸಿದರು. 15 ನಿಮಿಷ ಸಿಕ್ಕರೂ ಓದುತ್ತಿದ್ದರಂತೆ.
ಯುಪಿಎಸ್ ಸಿ ಸಿವಿಲ್ ಸರ್ವೀಸ್ ನ ಮುಖ್ಯ ಪರೀಕ್ಷೆಯಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದ ಐಚ್ಛಿಕ ವಿಷಯಗಳನ್ನೇ ಅಕ್ಷಿತಾ ಗುಪ್ತಾ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅವರ ತಯಾರಿಯಲ್ಲಿ ಸಾಕಷ್ಟು ಸಹಾಯಕ್ಕೆ ಬಂದಿತು. ಅವರು ಶಸ್ತ್ರಚಿಕಿತ್ಸೆ ಮತ್ತು ಅಂಗರಚನಾಶಾಸ್ತ್ರದಂತಹ ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. .
ಪಂಜಾಬ್ ಕೇಡರ್ ಐಎಎಸ್ ಅಧಿಕಾರಿ ಅಕ್ಷಿತಾ ಗುಪ್ತಾ ಅವರು 2020 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಖಿಲ ಭಾರತ 69 ರ್ಯಾಂಕ್ ತೆಗೆದಿದ್ದಾರೆ.
































