ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಮೊದಲು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಏಕೈಕ ಭಾರತೀಯ ಕ್ರಿಕೆಟಿಗ ಅಮಯ್ ಖುರಾಸಿಯಾ. ಇವರು ಕ್ರಿಕೆಟ್ ಮೈದಾನದಲ್ಲೂ ಹೊಳಪು ತೋರಿ, ದೇಶದ ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆ ಪಾಸಾಗಿ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಮಯ್ ಖುರಾಸಿಯಾ ಅವರ ಸಾಧನಾಗಾಥೆ.
1999ರಲ್ಲಿ ಅಮಯ್ ಖುರಾಸಿಯಾ ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶ ಪಡೆದರು. ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಆದರೆ ದುರದೃಷ್ಟವಶಾತ್, ಅವರು ಆಡಿದ 12 ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಅವರು 1999ರ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದರು. ಆದರೆ ಆ ವಿಶ್ವಕಪ್ನಲ್ಲಿ ಭಾರತ ಪರ ಒಂದೇ ಪಂದ್ಯ ಆಡುವ ಅವಕಾಶ ಸಿಕ್ಕಿತು. ಖುರಾಸಿಯಾ ಅವರು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಮತ್ತು ಅಜಿತ್ ಅಗರ್ಕರ್ ಅವರ ಜೊತೆ ಆಡಿದರು. ಆದರೆ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕು ಹೆಚ್ಚು ದಿನ ಇರಲಿಲ್ಲ. ಕ್ರಿಕೆಟ್ನಲ್ಲಿ ಹೆಚ್ಚಿನ ಅವಕಾಶ ಸಿಗದೆ, ಖುರಾಸಿಯಾ ಅವರು ತಮ್ಮ ಇನ್ನೊಂದು ಕನಸಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಭಾರತೀಯ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಸರ್ಕಾರಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಾ, ಅವರು ದೇಶೀಯ ಕ್ರಿಕೆಟ್ನಲ್ಲೂ ತಮ್ಮ ಮೆರಗು ತೋರಿದರು. 2006ರಲ್ಲಿ ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ, ಅವರು ಕೋಚಿಂಗ್ ವೃತ್ತಿಗೆ ಕಾಲಿಟ್ಟರು. ಅವರ ಮಾರ್ಗದರ್ಶನದಲ್ಲಿ ಆವೇಶ್ ಖಾನ್ ಮತ್ತು ರಜತ್ ಪಾಟಿದಾರ್ ಅವರಂತಹ ಪ್ರತಿಭಾವಂತ ಆಟಗಾರರು ಬೆಳೆಯಲು ಪ್ರಾರಂಭಿಸಿದರು. 2024ರಲ್ಲಿ ಖುರಾಸಿಯಾ ಕೇರಳ ರಣಜಿ ತಂಡದ ಕೋಚ್ ಆಗಿ ಆಯ್ಕೆಯಾದರು ಮತ್ತು ಅವರ ಮಾರ್ಗದರ್ಶನದಲ್ಲಿ ಕೇರಳ ತಂಡ ಫೈನಲ್ಗೂ ತಲುಪಿತು.
ಇಂದಿಗೂ ಖುರಾಸಿಯಾ ಸರ್ಕಾರಿ ಅಧಿಕಾರಿಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ, ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಒಂದೇ ವೇಳೆ ಕ್ರಿಕೆಟಿಗ, ಸರ್ಕಾರಿ ಅಧಿಕಾರಿ ಹಾಗೂ ಕೋಚ್ ಆಗಿ ತಮ್ಮ ಜೀವನದಲ್ಲಿ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಹಾಗಾಗಿ, ಅಮಯ್ ಖುರಾಸಿಯಾ ಅವರ ಕಥೆ ದೇಶದ ಯುವಕರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.
































