ಚಿತ್ರದುರ್ಗ: ಭಾರತದಲ್ಲಿ ದ್ವೇಷ ತೊರೆದು, ಸೌಹಾರ್ದತೆ ಸಾರಿದ ವ್ಯಕ್ತಿತ್ವಗಳ ಎಲ್ಲ ವಿಚಾರಗಳನ್ನೂ “ಸೌಹಾರ್ದ ಭಾರತ” ಕೃತಿಯಲ್ಲಿ ಕಾಣಬಹುದಾಗಿದ್ದು, ಜನಮಾನಸಕ್ಕೆ ತಲುಪುವುದೇ ಕೃತಿಯ ಆಶಯವಾಗಿದೆ ಎಂದು ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು.
ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ, ನಾಡು ನುಡಿ ಬಳಗ, ಅಂಬೇಡ್ಕರ್ ವಿಚಾರ ವೇದಿಕೆ, ಮೈತ್ರಿ ಪುಸ್ತಕ ಮನೆ ಸಹಯೋಗದೊಂದಿಗೆ ನಾಡೋಜ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಕೃತಿಯ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಇಂದು ಅಸಹನೀಯವಾದ, ದ್ವೇಷಮಯವಾದ ವಾತಾವರಣದಲ್ಲಿ ಇರುವುದರಿಂದ ಈ ಬಿಕ್ಕುಟ್ಟುಗಳನ್ನು ದಾಟಲು ನಾವು ಚಲನಶೀಲತೆ ರೂಢಿಸಿಕೊಳ್ಳದಿದ್ದರೆ ಬಹುಶಃ ಭಾರತ ಸರ್ವನಾಶವಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬರಗೂರು ರಾಮಚಂದ್ರಪ್ಪ ಅವರು ಸೌಹಾರ್ದ ಭಾರತ ಕೃತಿಯಲ್ಲಿ ವಿಶ್ವಮಾನವತೆ ಹಾಗೂ ಎಲ್ಲರನ್ನೂ ಒಳಗೊಳ್ಳಬಹುದಾದ ಅಲೋಚನಾ ಕ್ರಮ ಬಿತ್ತುವ ಪ್ರಯತ್ನವನ್ನು ಮಾಡಿದ್ದಾರೆ. ಕನ್ನಡ ಪರಂಪರೆಗೆ ಸಹಿಷ್ಣುತೆ, ಸೌಹಾರ್ದತೆ ಹೊಸ ಪರಿಕಲ್ಪನೆ ಅಲ್ಲ. ಪರಂಪರಾಗತವಾಗಿ ಮತ್ತೆ ಮತ್ತೆ ಪುನರುಕ್ತವಾಗುತ್ತಾ ಇಡೀ ಸಮುದಾಯಗಳು ಈ ಪರಧರ್ಮ ಸಹಿಷ್ಣುತತೆ, ಪರ ವಿಚಾರಗಳ ಸಹಿಷ್ಣುತತೆ ಇವುಗಳ ಮೂಲಕ ಒಂದು ಚಲನಶೀಲವಾದ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಧರ್ಮಗಳ ನಡುವೆ ಸಮನ್ವಯ ಸಾಧಿಸಕೊಳ್ಳದಿದ್ದರೆ, ಪರ ಧರ್ಮ, ಪರರ ವಿಚಾರಗಳನ್ನು ಸಹಿಸಿಕೊಳ್ಳದಿದ್ದರೆ ಅದು ಸರಿಯಾದ ಜೀವನಕ್ರಮವಲ್ಲ. ಸ್ವಾತಂತ್ರ್ಯ ಮತ್ತು ಸಮಾನತೆಗೆ ಸಹೋದರತ್ವ ಇಲ್ಲದಿದ್ದರೆ ಅರ್ಥಪೂರ್ಣವಾಗುವುದೇ ಇಲ್ಲ. ಬರಗೂರು ಅವರು ಸಹೋದರತ್ವಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಹೇಳಿದರು.
ನಮ್ಮ ಪರಂಪರೆಯ ಕನ್ನಡಿ ಸೌಹಾರ್ದ ಭಾರತ. ನಾವು ಜಡತ್ವದಿಂದ ಚಲನಶೀಲತೆಯೆಡೆಗೆ ಸಾಗಬೇಕು. ಇದುವೆ ನಿಜವಾದ ಪ್ರಗತಿ. ನಾವು ಸೌಹಾರ್ದತೆ ಕಾಪಾಡಿಕೊಳ್ಳಬೇಕಾದರೆ ಮುಖ್ಯವಾಗಿ ನಮ್ಮನ್ನು ನಾವು ಒಳ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಈ ವಿವೇಕವೇ ನಮ್ಮನ್ನು ಮುನ್ನಡೆಸುವ ದಾರಿ ಎಂದು ಬರಗೂರು ರಾಮಚಂದ್ರಪ್ಪ ಅವರು ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕೃತಿ ಜನಾರ್ಪಣೆ ಮಾಡಿ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆಗಳನ್ನು ಇಂದು ನಾವು ಕಾಣುತ್ತಿದ್ದೇವೆ. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಹಗೆತನ, ಆತ್ಮವಂಚನೆ, ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಕೃತಿಯು ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ಹೇಳಿದರು.
ಮಹನೀಯರಾದ ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರು ಸತ್ಯ ಮತ್ತು ಅಹಿಂಸೆ ಮಹತ್ವ ಸಾರಿದರು. ಈ ತತ್ವಗಳು ಸಮಾಜದಲ್ಲಿ ಸಹಿಷ್ಣುತೆ, ಸಮಾನತೆ ಮತ್ತು ಆತ್ಮ ಗೌರವ ಬೆಳೆಸುವಲ್ಲಿ ಪ್ರೇರಣೆಯಾಗಿವೆ. ಆದರೆ ಪ್ರಸ್ತುತ ಸಂದರ್ಭಧಲ್ಲಿ ಸಮಾಜ ಸತ್ಯದ ಕಡೆಗೆ ಸಾಗುತ್ತಿಲ್ಲ. ಸತ್ಯ ಹಾಗೂ ಅಹಿಂಸೆ ಯಾರಿಗೂ ಬೇಕಾಗಿಲ್ಲ. ಎಲ್ಲವೂ ಹಿಂಸಾತ್ಮಕ ವ್ಯಾಕುಲತೆಯಲ್ಲಿ ತೊಡಗಿದ್ದಾರೆ. ಸತ್ಯ ಮತ್ತು ಅಹಿಂಸೆಯನ್ನು ಸಾರ್ವಜನಿಕ ಹಾಗೂ ಸಾರ್ವಕಾಲಿಕ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ನಾಡೋಜ ಬರಗೂರು ರಾಮಚಂದ್ರಪ್ಪನವರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ, ಬರಹದಲ್ಲಿ ಅದರನ್ನು ಮರು ರೂಪಿಸಿದ, ನಾಡಿನೂದ್ದಕ್ಕೂ ಈ ಹೊತ್ತಿಗೆ ಅಗತ್ಯವಾದ ಮಾನವೀಯ ಮನಸ್ಸುಗಳನ್ನು ಕಟ್ಟುತ್ತಿರುವ ಸಾಂಸ್ಕøತಿಕ ರಾಯಭಾರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಬರಗೂರು ರಾಮಚಂದ್ರಪ್ಪನವರು ಸಮಕಾಲೀನ ಸಾಕ್ಷಿಪ್ರಜ್ಞೆಯಾಗಿ ಬಹುತ್ವದ ನಾಡನ್ನು ಕಟ್ಟಲು ನಾಡಿನಾದ್ಯಂತ ಸುತ್ತಾಡುತ್ತಾ ಶ್ರಮಿಸುತ್ತಿದ್ದಾರೆ. ಭಾವೈಕ್ಯದ ಭಾರತ ಕಟ್ಟುವ ಅವರ ಜೊತೆ ಇಡೀ ನಾಡು ಕೈಜೋಡಿಸಬೇಕಿದೆ. ಅವರ ಬರಹಗಳನ್ನು ಅಧ್ಯಯನ ಮಾಡುವ ಮೂಲಕ ಸೌಹಾರ್ದ ಭಾರತ ಕಟ್ಟುವ ಹೆಜ್ಜೆಯ ಜೊತೆ ಹೆಜ್ಜೆ ಹಾಕೋಣ. ಸಹಬಾಳ್ವೆ ಸಾಮರಸ್ಯ ಈ ನೆಲದ ಗುಣಗಳು. ಅವುಗಳನ್ನು ನಡೆ-ನುಡಿಗಳಲ್ಲಿ ಅಳವಡಿಸಿಕೊಂಡು ಮನುಷ್ಯರಾಗೋಣ ಎಂದು ಸಲಹೆ ನೀಡಿದರು.
ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಹಂಪಯ್ಯನ ಮಾಳಿಗೆ ಧನಂಜಯ ಇದ್ದರು.
































