ಬೆಂಗಳೂರು: ಶ್ರೀಲಂಕಾ ಸಮೀಪ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣದ ಕೆಲವು ಜಿಲ್ಲೆಗಳಲ್ಲಿ ಒಂದೆರಡು ದಿನ ಹಗುರ ಮಳೆಯಾಗಲಿದೆ. ಚಳಿಯ ತೀವ್ರತೆ ಕೂಡ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯ ಶ್ರೀಲಂಕಾ ಪೂರ್ವ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಳೆ ಮಾರುತಗಳು ಸೃಷ್ಟಿಯಾಗಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹಾದು ಹೋಗಲಿದೆ. ಇದರಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಒಂದೆರಡು ದಿನ ಹಗುರ ಮಳೆಯಾಗುವ ಸಂಭವ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಹಗಲಿನ ವೇಳೆಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರಿ ಇಳಿಕೆಯಾಗಿದ್ದು, ಚಳಿ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರಿನ ಕೆಲವು ಕಡೆ ಮಳೆಯಾದ ವರದಿಯಾಗಿದೆ. ಉತ್ತರ ಒಳನಾಡಿನ ಕಲಬುರಗಿ, ವಿಜಯಪುರ, ಬೀದರ್, ಧಾರವಾಡದಲ್ಲಿ ಚಳಿ ಮುಂದುವರೆದಿದ್ದು, ಶೀತದ ಅಲೆ ಬೀಸುವ ಸಾಧ್ಯತೆ ಇದೆ.
































