ಮಲೆಬೆನ್ನೂರು: ಸಮೀಪದ ಕುಂಬಳೂರು ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ಅಂಗವಾಗಿ ಈ ತಿಂಗಳ 15ರಂದು ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟಿ ಉಮಾಶಂಕರ್ ಹೇಳಿದರು.
ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ಶಿಬಿರ, ಲಯನ್ಸ್ ರಕ್ತನಿಧಿ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ, ದಾವಣಗೆರೆ ಅಗರ್‍ವಾಲ್ ನೇತ್ರ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ ಎಂದು ಸೋಮವಾರ ದೇವಸ್ಥಾನ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಆದಿತ್ಯ ಸೂರ್ಯನಾರಾಯಣ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ 25 ಸಾವಿರಕ್ಕೂ ಹೆಚ್ಚು ಭಕ್ತರು ಈ ಬಾರಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಎಲ್ಲ ಭಕ್ತರಿಗೆ ದಿನವಿಡೀ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ವಿವಿಧ ಆರೋಗ್ಯ ಶಿಬಿರಗಳನ್ನು ಧರ್ಮದರ್ಶಿ ಮತ್ತು ಲಯನ್ಸ್ ಕಾರ್ಯದರ್ಶಿ ಬೆನಕೊಂಡಿ ಚಿದಾನಂದಪ್ಪ ಉದ್ಘಾಟಿಸುವರು. ಲಯನ್ಸ್ ಅಧ್ಯಕ್ಷ ಸಿರಿಗೆರೆ ಸಿದ್ದಪ್ಪ, ಚಿಟಕ್ಕಿ ನಾಗರಾಜ್, ಜನನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ವಿವರಿಸಿದರು.
ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾಧ್ಯಮ & ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಅವರು, “ಅಂದು ಬೆಳಿಗ್ಗೆ 10 ರಿಂದ ಸಂಜೆಯವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ ಮತ್ತು ಆಹಾರ ಸಲಹೆ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಸಮಾಲೋಚನೆ, ಆಕ್ಯುಪಂಕ್ಚರ್ ಮತ್ತು ಆಕ್ಯುಪ್ರೆಶರ್, ಬೊಜ್ಜು ಮತ್ತು ಬೆನ್ನು ನೋವು ಸಮಸ್ಯೆಗೆ ಚಿಕಿತ್ಸೆ ಮತ್ತಿತರ ಸೌಲಭ್ಯಗಳಿದ್ದು, ನುರಿತ ತಜ್ಞ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯರು ಶಿಬಿರದಲ್ಲಿ ಭಾಗವಹಿಸುವರು” ಎಂದು ವಿವರಿಸಿದರು.
ಬೆನ್ನುನೋವು, ಕೀಲುನೋವು, ಅಧಿಕ ರಕ್ತದ ಒತ್ತಡ, ಬೊಜ್ಜು, ಮಧುಮೇಹ, ಹೈಪರ್‍ಟೆನ್ಷನ್, ಥೈರಾಯ್ಡ್ ತೊಂದರೆ, ಗ್ಯಾಸ್ಟ್ರೈಟೀಸ್, ಮೈಗ್ರೇನ್, ನಿದ್ರಾಹೀನತೆ, ಉದ್ವಿಗ್ನತೆ, ಪಾಶ್ರ್ವವಾಯು, ಸ್ಪಾಂಡಿಲೈಟಿಸ್ ಮತ್ತಿತರ ಸಮಸ್ಯೆಗಳಿಂದ ಬಳಲುವವರು ಶಿಬಿರದ ಪ್ರಯೋಜನ ಪಡೆಯಬಹುದು ಎಂದರು. ವಿವರಗಳಿಗೆ ಮೊಬೈಲ್: 0449177677, 9886413663 ಸಂಪರ್ಕಿಸಬಹುದು.

































