ಬೆಂಗಳೂರು: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ ಆರು ಮಂದಿ ಉಪನ್ಯಾಸಕರನ್ನು ವಜಾ ಮಾಡಲಾಗಿದೆ.
ಜ. 8 ರಂದು ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿಗೆ ಕಾಲೇಜಿನ ಉಪನ್ಯಾಸಕರೇ ಕಾರಣ ಎಂದು ಉಪನ್ಯಾಸಕರು ಮತ್ತು ಆಕೆಯ ಸಹಪಾಠಿಗಳು ಆರೋಪಿಸಿದ್ದರು. ಉಪನ್ಯಾಸಕರು ಮಾಡಿದ ಜನಾಂಗೀಯ ನಿಂದನೆ, ಕಿರುಕುಳದಿಂದ ನೊಂದು, ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಈ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರೂ ಸೇರಿದಂತೆ ಒಟ್ಟು ಐವರು ಉಪನ್ಯಾಸಕರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ಆರು ಮಂದಿ ಉಪನ್ಯಾಸಕರನ್ನು ಕರ್ತವ್ಯದಿಂದ ವಜಾ ಮಾಡಿದೆ. ಒಎಂಆರ್ ವಿಭಾಗದ ಉಪನ್ಯಾಸಕರಾದ ಡಾ. ಅನಿಮೋಲ್, ಡಾ. ಶಬಾನಾ, ಡಾ. ಫೈಕಾ, ಡಾ. ಸಿಂಧು, ಡಾ. ಸುಶ್ಮಿನಿ, ಡಾ. ಅಲ್ಬಾ ಅವರನ್ನು ವಜಾ ಮಾಡಲಾಗಿದೆ.
ಮೃತ ಯಶಸ್ವಿನಿ ತಾಯಿ ಪರಿಮಳ ತಮ್ಮ ಮಗಳ ಸಾವಿಗೆ ಸಿಗುವ ನ್ಯಾಯ ಎಲ್ಲರಿಗೂ ಸಂದೇಶವಾಗಬೇಕು. ಅವಳು ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕು ಎನ್ನುವ ಕನಸು ಹೊತ್ತುಕೊಂಡಿದ್ದಳು. ಅವಳ ಕನಸುಗಳನ್ನು ಹಿಚುಕಿ ಹಾಕಲಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಆಕೆಯ ಸಾವಿಗೆ ಕಾರಣರಾದವರ ವಿರುದ್ಧ ಆಕೆಯ ಸಹಪಾಠಿಗಳು ಪ್ರತಿಭಟನೆ ನಡೆಸಿದ್ದಾರೆ.

































