ಮಲಪ್ಪುರಂ : ಕೇರಳದ ಕುಂಭಮೇಳ ಎಂದೇ ಪ್ರಸಿದ್ಧಿಯಾಗಿರುವ ಮಹಾಮಾಘ ಮಹೋತ್ಸವಕ್ಕೆ ಮಲಪ್ಪುರಂ ಜಿಲ್ಲೆಯ ತಿರುನವಾಯದಲ್ಲಿ ಭವ್ಯವಾಗಿ ಚಾಲನೆ ದೊರೆತಿದೆ. ಪುರಾತನ ಪರಂಪರೆ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಈ ಮಹೋತ್ಸವವು ಜನವರಿ 16 ರಿಂದ ಫೆಬ್ರವರಿ 3 ರವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಮತ್ತು ಸಾಧು-ಸಂತರ ಸಮಾಗಮಕ್ಕೆ ವೇದಿಕೆಯಾಗಲಿದೆ.
ಗುರು ಗ್ರಹದ ಚಕ್ರದಲ್ಲಿ ಒಮ್ಮೆ, ಅಂದರೆ 12 ವರ್ಷಗಳಿಗೊಮ್ಮೆ ಮಾಘ ಮಾಸದ ಹುಣ್ಣಿಮೆ ಮತ್ತು ಮಾಘ ನಕ್ಷತ್ರ ಒಂದೇ ದಿನ ಸೇರುವ ಸಂದರ್ಭದಲ್ಲಿ ಮಹಾಮಾಘಂ ಆಚರಿಸಲಾಗುತ್ತದೆ. ಈ ಅಪರೂಪದ ಸಂಯೋಗದಿಂದಾಗಿ ಮಹಾಮಾಘ ಮಹೋತ್ಸವವನ್ನು ಅತ್ಯಂತ ಪವಿತ್ರ ಮತ್ತು ಮಹತ್ವದ ಹಬ್ಬವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ಇದನ್ನು ‘ದಕ್ಷಿಣ ಕೇರಳದ ಕುಂಭಮೇಳ’ ಎಂದೂ ಕರೆಯಲಾಗುತ್ತದೆ.
ಸಾಮಾನ್ಯವಾಗಿ ತಮಿಳುನಾಡಿನ ಕುಂಭಕೋಣಂನಲ್ಲಿ ಮಹಾಮಾಘಂ ಭವ್ಯವಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೇರಳದಲ್ಲಿ, ವಿಶೇಷವಾಗಿ ತಿರುನವಾಯದಲ್ಲಿ, ಈ ಉತ್ಸವವನ್ನು ಅತ್ಯಂತ ವೈಭವ ಮತ್ತು ಭಕ್ತಿ ಭಾವದೊಂದಿಗೆ ಆಚರಿಸಲಾಗುತ್ತಿದೆ. ಹಬ್ಬದ ಪ್ರಮುಖ ಆಚರಣೆಗಳಲ್ಲಿ ಭಾರತಪುಳ ನದಿಯಲ್ಲಿ ಪವಿತ್ರ ಸ್ನಾನ, ಗಂಗಾ ಆರತಿಯ ಮಾದರಿಯಲ್ಲಿ ನಡೆಯುವ ನೀಲಾ ಆರತಿ, ಮೋಕ್ಷ ಪೂಜೆಗಳು, ರಥಯಾತ್ರೆ, ಸನ್ಯಾಸಿಗಳ ಸಂಗಮ ಹಾಗೂ ವೇದ ಪಠಣ ಪ್ರಮುಖವಾಗಿವೆ.
ಮಹಾಮಾಘ ಹಬ್ಬದ ಹಿಂದೆ ಪೌರಾಣಿಕ ಹಿನ್ನೆಲೆಯೂ ಇದೆ. ಪರಶುರಾಮನ ಸೂಚನೆಯಂತೆ ಬ್ರಹ್ಮನು ಲೋಕ ಕಲ್ಯಾಣಕ್ಕಾಗಿ ತಿರುನವಾಯದಲ್ಲಿ ಮೊದಲ ಯಜ್ಞವನ್ನು ನೆರವೇರಿಸಿದನೆಂಬ ನಂಬಿಕೆ ಇದೆ. ಅಲ್ಲದೆ, ಪ್ರಾಚೀನ ಕಾಲದಲ್ಲಿ ಇದೇ ಪ್ರದೇಶದಲ್ಲಿ ನಡೆಯುತ್ತಿದ್ದ ‘ಮಾಮಂಗಂ’ ಹಬ್ಬವೂ ಮಹಾಮಾಘಂ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ ಎಂದು ಪುರಾಣಗಳು ಹೇಳುತ್ತವೆ.
ಜ್ಯೋತಿಷಿಗಳ ಪ್ರಕಾರ, ಮೌನಿ ಅಮಾವಾಸ್ಯೆ (ಜನವರಿ 19), ವಸಂತ ಪಂಚಮಿ ಹಾಗೂ ರಥ ಸಪ್ತಮಿ ದಿನಗಳು ಪವಿತ್ರ ಸ್ನಾನಕ್ಕೆ ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಭಾರತಪುಳ ನದಿಯಲ್ಲಿ ಸ್ನಾನ ಮಾಡುವುದರಿಂದ ಆಧ್ಯಾತ್ಮಿಕ ಶುದ್ಧೀಕರಣ, ಪ್ರಾಯಶ್ಚಿತ್ತ ಹಾಗೂ ಪುಣ್ಯಲಾಭ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಮಾಘ ಮಾಸದಲ್ಲಿ ಮಾಡುವ ಧಾರ್ಮಿಕ ಕರ್ಮಗಳಿಗೆ ದ್ವಿಗುಣ ಫಲ ಸಿಗುತ್ತದೆ ಎಂಬ ವಿಶ್ವಾಸವಿದ್ದು, ಎಲ್ಲಾ ಜಾತಿ ಹಾಗೂ ಧರ್ಮಗಳ ಭಕ್ತರು, ತಪಸ್ವಿಗಳು ಮತ್ತು ಸಾಧು-ಸಂತರೂ ಈ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ರಥಯಾತ್ರೆಯು ಜನವರಿ 19ರಂದು ಭಾರತಪುಳ ನದಿಯ ಮೂಲವಾದ ತಿರುಮೂರ್ತಿ ಬೆಟ್ಟದಿಂದ ಪ್ರಾರಂಭವಾಗಿ ಜನವರಿ 22ರಂದು ತಿರುನವಾಯ ತಲುಪಲಿದೆ.
ಆಧ್ಯಾತ್ಮಿಕ ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ಸಂಗಮವಾಗಿರುವ ಈ ಮಹಾಮಾಘ ಮಹೋತ್ಸವವು ಕೇರಳದ ಧಾರ್ಮಿಕ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ತಿರುನವಾಯ ಕ್ಷೇತ್ರಕ್ಕೆ ಆಗಮಿಸುತ್ತಾರೆ.































