ಚಿತ್ರದುರ್ಗ : ಜಾತಿ ಉಳಿವಿಗಾಗಿ ನಮ್ಮ ಸಂಘಟನೆಯೇ ವಿನಃ ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎನ್.ರಾಮಚಂದ್ರಪ್ಪ ಹೇಳಿದರು.
ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾತಿ ಗಣತಿಯಲ್ಲಿ ಕೊರಮ ಎನ್ನುವ ಬದಲು ಕೊರಚ ಎಂದು ಬರೆಸಿದರೆ ಮಾತ್ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಉಳಿದುಕೊಳ್ಳುತ್ತೇವೆ. ಕೊರಚ ಜನಾಂಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸಂಘಟನೆ ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗುತ್ತದೆ. ಒಳ ಮೀಸಲಾತಿಯಲ್ಲಿ ನಮ್ಮನ್ನು ಮೂರನೆ ಗುಂಪಿಗೆ ಸೇರಿಸಿರುವುದರಿಂದ ಭೋವಿ, ಲಂಬಾಣಿ, ಕೊರಮರ ಜೊತೆ ಪೈಪೋಟಿ ನೀಡಲು ಆಗುವುದಿಲ್ಲ. ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸಬೇಕಿದೆ ಎಂದು ಕೊರಚ ಜನಾಂಗದವರನ್ನು ಜಾಗೃತಿಗೊಳಿಸಿದರು.
ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ ಐವತ್ತೈದು ಸಾವಿರ ಜನಸಂಖ್ಯೆಯುಳ್ಳ ಕೊರಚ ಜನಾಂಗ ಭೋವಿ, ಲಂಬಾಣಿ, ಕೊರಮ ಜಾತಿಗಳೊಡನೆ ಸ್ಪರ್ಧಿಸುವುದು ಅಸಾಧ್ಯ. ಅದಕ್ಕಾಗಿ ನಮ್ಮನ್ನು ಅಲೆಮಾರಿ ಜನಾಂಗಕ್ಕೆ ಸೇರಿಸಬೇಕು. ಅವಿದ್ಯಾವಂತರ ಸಂಖ್ಯೆ ನಮ್ಮಲ್ಲಿ ಜಾಸ್ತಿಯಾಗುತ್ತಿರುವುದರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರುವುದು ಕಷ್ಟವಾಗುತ್ತದೆ. ಶಿಕ್ಷಣದಿಂದ ವಂಚಿತರಾಗುತ್ತಿರುವುದರಿಂದ ಜೀವನಕ್ಕಾಗಿ ಕಳ್ಳತನ, ಸುಲಿಗೆ, ದರೋಡೆಯಂತಹ ಕೃತ್ಯಗಳಲ್ಲಿ ತೊಡಗಬೇಕಾಗುತ್ತದೆ. ಹಾಗಾಗಿ ನಮ್ಮನ್ನು ಅಸ್ಪøಶ್ಯರೆಂದು ಭಾವಿಸಿ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ಕಾರ್ಯಾಧ್ಯಕ್ಷ ಕೆ.ಎನ್.ಪ್ರಭು, ಗೌರವಾಧ್ಯಕ್ಷ ಸಿ.ಜಯಪ್ಪ, ಉಪಾಧ್ಯಕ್ಷ ಕೆ.ಬಾಲಪ್ಪ, ಖಜಾಂಚಿ ಸುರೇಶ್ ಬಿ.ಎನ್. ಸಂಘಟನಾ ಕಾರ್ಯದರ್ಶಿಗಳಾದ ನಾಗಪ್ಪ ಎಂ. ರಾಜಣ್ಣ, ನಿರ್ದೇಶಕರುಗಳಾದ ಆನಂದ ಕೆ. ಸುನೀಲ್ಕುಮಾರ್, ಗಾಳಪ್ಪ, ತಿಮ್ಮಣ್ಣ ಇವರುಗಳು ವೇದಿಕೆಯಲ್ಲಿದ್ದರು.
ಕೊಪ್ಪಳ ಅಧ್ಯಕ್ಷ ಅಂಜಿನಪ್ಪ, ಚಳ್ಳಕೆರೆಯ ದೇವೇಂದ್ರಪ್ಪ, ಚಿತ್ರದುರ್ಗದ ಈರಪ್ಪ, ಭದ್ರಾವತಿಯ ಈಶ್ವರಪ್ಪ, ಬಳ್ಳಾರಿಯ ಕಾವ್ಯ, ಹುಸೇನಮ್ಮ, ಕುಮಾರ, ಯಲ್ಲಪ್ಪ, ಮಾರಪ್ಪ, ಗವಿಸಿದ್ದಪ್ಪ, ಮಾರಕ್ಕ, ಗಂಗಮ್ಮ ಇವರುಗಳು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.

































