ಚಿತ್ರದುರ್ಗ : ಹಿಂದೂ ಸಮಾಜದ ಸಂಘಟನೆ ಸ್ವಾವಲಂಬಿ ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಮಂಡಲ ಪಂಚಾಯಿತಿ ನಗರಗಳಲ್ಲಿ ವಸತಿ ಮಟ್ಟದಲ್ಲಿ ಆಯೋಜಿಸುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಗ್ರಾಮಾಂತರ ಅಧ್ಯಕ್ಷ ಅನಿತ್ ಕುಮಾರ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ನಗರ ಮತ್ತು ಗ್ರಾಮಾಂತರದ ಹಿಂದೂ ಸಂಗಮ ಆಯೋಜನಾ ಸಮಿತಿಯು. ನಗರದ 35 ವಾರ್ಡಗಳು ಹಾಗೂ ಗ್ರಾಮಾಂತರದ 32 ಮಂಡಲಗಳನ್ನು ಪ್ರತಿನಿಧಿಸುವಂತೆ ಆಯ್ದ 18 ಸ್ಥಳಗಳಲ್ಲಿ ಹಿಂದೂ ಸಂಗಮಗಳನ್ನು ಜನವರಿ 18 ರಿಂದ ಪ್ರಾರಂಭವಾಗಿ ಫೆಬ್ರವರಿ 8 ರವರೆಗೆ ವಿವಿಧ ದಿನಗಳಂದು ಆಯೋಜಿಸುತ್ತಿದೆ. ನಮ್ಮ ದೇವಾಲಯಗಳು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೇ ನಮ್ಮ ಧರ್ಮ. ಸಂಸ್ಕೃತಿ, ಮೌಲ್ಯಗಳನ್ನು ಆಚರಣೆಗೆ ತರುವಲ್ಲಿ ಜಾಗೃತಿಯ. ಶಕ್ತಿಯ ಕೇಂದ್ರವಾಗಬೇಕು. ವ್ಯಕ್ತಿಯು ತನ್ನ. ಕುಟುಂಬದ ಮತ್ತು ಸಮಾಜದ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವಲ್ಲಿ ಜವಾಬ್ದಾರಿಯ ಪಾತ್ರವನ್ನು ನಿರ್ವಹಿಸಬೇಕೆಂದರು.
ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನೆ, ಪರಿಸರದ ಬಗ್ಗೆ ಕಾಳಜಿ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಜೀವನ ಪದ್ಧತಿಯ ವಿಕಾಸ. ಸಮಾಜದ ಎಲ್ಲರೊಂದಿಗೆ ಸಾಮರಸ್ಯದ ಭಾವ ನಾಗರೀಕ ಕರ್ತವ್ಯಗಳನ್ನು ನಿತ್ಯ ಪಾಲಿಸುವುದು; ಈ ಪಂಚ ಪರಿವರ್ತನೆಯ ಅಂಶಗಳು ಸಮಾಜದಲ್ಲಿ ಅರಳಬೇಕು. ಪ್ರತಿ ವ್ಯಕ್ತಿಯೂ ತನ್ನ ಮನೆ. ವೃತ್ತಿಯ ಕ್ಷೇತ್ರ. ಸಮಾಜದಲ್ಲಿ ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುವ ಮಹತ್ತರ ಉದ್ದೇಶವನ್ನೂ ಹಿಂದೂ ಸಂಗಮವು ಹೊಂದಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಜೆ.ಎನ್.ಕೋಟೆಯಲ್ಲಿ ಫೆ. 1 ರಂದು ಮಧ್ಯಾಹ್ನ 2.30ಕ್ಕೆ, ಭೀಮಸಮುದ್ರದಲ್ಲಿ ಫೆ. 3 ರಂದು ಸಂಜೆ 4ಕ್ಕೆ, ಚಿಕ್ಕಗೊಂಡನಹಳ್ಳಿಯಲ್ಲಿ ಫೆ. 7 ರ ಬೆಳಿಗ್ಗೆ 10.30ಕ್ಕೆ ಚಿಕಕಬೆನ್ನೂರಿನಲ್ಲಿ ಫೆ. 7 ರ ಮಧ್ಯಾಹ್ನ 2.30ಕ್ಕೆ ಲಕ್ಷೀಸಾಗರದಲ್ಲಿ ಫೆ, 8 ರ ಸಂಜೆ 4ಕ್ಕೆ ಹಿಂದೂ ಸಂಗಮ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿಯ ನಗರಾಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ, ಗ್ರಾಮ ಮತ್ತು ವಸತಿಯ ಮಟ್ಟದಲ್ಲಿ ಹಿಂದೂ ಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾಜ ಕಟಿಬದ್ಧವಾಗಬೇಕು ಎಂಬ ಆಶಯದೊಂದಿಗೆ ಹಿಂದೂ ಸಮಾಜದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಸಮಾಜೋತ್ಸವದಲ್ಲಿ ಸಮಾಜದ ಪ್ರತಿಷ್ಠಿತ ಗಣ್ಯರೂ, ಯುವ ಸಾಧಕರು, ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದರು.
ಚಿತ್ರದುರ್ಗ ನಗರದಲ್ಲಿ ಜ. 24ರ ಶನಿವಾರ ಕೆಳಗೋಟೆಯ ಅಂಬಾಭವಾನಿ ದೇವಸ್ಥಾನ ಸಾನಿಧ್ಯ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಶಿವ ರಶ್ಮಿ,ಜ 25ರ ಭಾನುವಾರ ಮೆದೇಹಳ್ಳಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕ ಸಾನಿಧ್ಯ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿಗಳು ಜ.31ರ ಶನಿವಾರ ಜೋಗಿಮಟ್ಟಿ ರಸ್ತೆಯಲ್ಲಿ ಸಾನಿಧ್ಯ ಶ್ರೀ ಶಾರದಾ ರಾಮಕೃಷ್ಣ ಆಶ್ರಮದ ಶ್ರೀ ಬ್ರಹ್ಮನಿಷ್ಟಾನಂದ ಸ್ವಾಮೀಜಿ, ಫೆ. 1 ಭಾನುವಾರ ವಾಸವಿ ಶಾಲೆ ಸಾನಿಧ್ಯ ಹಿರಿಯೂರು ತಾ ಸುಕ್ಷೇತ್ರ ಆಲೂರಿನ ಶ್ರೀ ಶಂಕರಾನಂದ ಮಹಾ ಸ್ವಾಮಿಗಳು, ಫ. 8ರ ಭಾನುವಾರ ಶ್ರೀ ತ್ರಿಶೂಲ ಆಂಜನೇಯ ದೇವಸ್ಥಾನ ಸಾನಿಧ್ಯ ಕೊಟ್ಟೂರು ಕಟ್ಟಿಮನಿ ಹಿರೇಮಠದ ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ವಹಿಸಲಿದ್ದಾರೆ. ಎಲ್ಲಾ ಹಿಂದೂ ಬಾಂಧವರು ಈ ಸಮಾಜೋತ್ಸವದಲ್ಲಿ ಭಾಗವಹಿಸಬೇಕು. ತನ್ಮೂಲಕ ಸಮಾಜದ ಜಾಗೃತಿಯಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು ಎಂದು ಸಮಿತಿಯು ಕೋರಿದರು.
ಗೋಷ್ಟಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಉಪಾಧ್ಯಕ್ಷ ಮೋಹನ್, ನಂದಿ ನಾಗರಾಜ್, ನಾಗರಾಜ್ ಬೇದ್ರೇ, ನಾಗರಾಜ್ ಮಲ್ಲಾಪುರ, ದೇವರಾಜ್ ಕೋಟ್ಲ್, ಸುನೀತಾ ಮರಳಿ, ಶಾಂತ ಆಶೋಕ್ ಕಲ್ಲೇಶಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

































