ಸೂರತ್ : ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಉದ್ಘಾಟನೆಯ ಮೊದಲೇ ಕುಸಿದುಬಿದ್ದಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸೂರತ್ ಜಿಲ್ಲೆಯ 33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಲಾದ ಈ ಯೋಜನೆಗೆ ಇದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಜನವರಿ 19ರಂದು ನಡೆದ ಪ್ರಾಯೋಗಿಕ ಚಾಲನೆಯ ವೇಳೆ 11 ಲಕ್ಷ ಲೀಟರ್ ಸಾಮರ್ಥ್ಯದ, ಸುಮಾರು 15 ಮೀಟರ್ ಎತ್ತರದ ನೀರಿನ ಟ್ಯಾಂಕ್ ಏಕಾಏಕಿ ಕುಸಿದು ಬಿದ್ದಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮೂಡಿಸುವುದರ ಜೊತೆಗೆ ಆಡಳಿತದ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಪರೀಕ್ಷಾರ್ಥವಾಗಿ ಟ್ಯಾಂಕ್‌ಗೆ ಸುಮಾರು 9 ಲಕ್ಷ ಲೀಟರ್ ನೀರನ್ನು ತುಂಬಲಾಗಿತ್ತು. ನೀರು ತುಂಬಿಸುವ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಟ್ಯಾಂಕ್ ದಿಢೀರ್ ಎಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರ್ಘಟನೆಯ ಬಳಿಕ ಟ್ಯಾಂಕ್ ನಿರ್ಮಾಣಕ್ಕೆ ಬಳಸಲಾದ ನಿರ್ಮಾಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಅಲ್ಲದೆ, ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆಯೂ ವ್ಯಕ್ತವಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ ಹೆಚ್ಚಾಗಿದೆ. ಸ್ಥಳೀಯರು ಹಾಗೂ ಸಾಮಾಜಿಕ ಸಂಘಟನೆಗಳು ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿವೆ.

































