ಹೊಳಲ್ಕೆರೆ : ಪ್ರತಿ ಬೂತ್ನಲ್ಲಿಯೂ ಪಕ್ಷದ ಕಾರ್ಯಕರ್ತರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಗಟ್ಟಿಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ನೂತನ ಅಧ್ಯಕ್ಷರಿಗೆ ಕರೆ ನೀಡಿದರು.
ಭಾರತೀಯ ಜನತಾಪಾರ್ಟಿ ಹೊಳಲ್ಕೆರೆ ಮಂಡಲ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಮಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಭಾರತೀಯ ಜನತಾಪಾರ್ಟಿ ಮಾತ್ರ. ಹತ್ತು ವರ್ಷಗಳ ನಂತರ ರಾಮಗಿರಿ ಕುಮಾರಣ್ಣನವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಲಾಗಿದೆ. ಆಲದ ಮರದ ರೀತಿಯಲ್ಲಿ ಬೆಳೆದಿರುವ ಪಕ್ಷದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಆರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಕೆ.ಎಸ್.ನವೀನ್ ಮನವಿ ಮಾಡಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಆರು ಕ್ಷೇತ್ರಗಳಲ್ಲಿಯೂ ಪಕ್ಷ ಅಧಿಕಾರವನ್ನು ಹಿಡಿಯಬೇಕು. 21 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿಯೂ ನಮ್ಮ ಕಾರ್ಯಕರ್ತರು ಗೆಲ್ಲಬೇಕು. 38 ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ನಮ್ಮ ಕಾರ್ಯಕರ್ತರು ಹಿಡಿಯಬೇಕು. ಅದಕ್ಕಾಗಿ ಈಗಿನಿಂದಲೆ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಪಕ್ಷವನ್ನು ಸಂಘಟಿಸುವಂತೆ ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ ತಲ ತಲಾಂತರಗಳಿಂದಲೂ ಅಧಿಕಾರ ನಡೆಸುತ್ತ ಬರುತ್ತಿರುವ ಕಾಂಗ್ರೆಸ್ ಪಕ್ಷ ಎಂದಿಗೂ ದೇಶದ ಅಭಿವೃದ್ದಿ ಬಗ್ಗೆ ಚಿಂತಿಸಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಇವರುಗಳು ದೇಶದ ಪ್ರಧಾನಿಯಾಗಿದ್ದರು. ಈಗ ರಾಹುಲ್ಗಾಂಧಿ ಪ್ರಧಾನಿಯಾಗಲು ಹೊರಟಿದ್ದಾರೆ. ಕುಟುಂಬ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ನಿಂದ ದೇಶಕ್ಕೆ ಭವಿಷ್ಯವಿಲ್ಲ. ನಮ್ಮ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಸಾಮಾನ್ಯ ಕಾರ್ಯಕರ್ತನಿಗೂ ಅಧಿಕಾರ ನೀಡುತ್ತದೆ. ಹಾಗಾಗಿ ಬಿಜೆಪಿ. ನಂ.ಒನ್ ಪಾರ್ಟಿ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಪಂಚವೆ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರಮೋದಿರವರು ಕೆಲಸ ಮಾಡುತ್ತಿದ್ದಾರೆ. ಮೆಂಬರ್ಶಿಪ್ಗಾಗಿ ಕಾರ್ಯಕರ್ತರು ಪಾರ್ಟಿಯಲ್ಲಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹೈಕಮಾಂಡ್ ಎಂದರೆ ಕಾಂಗ್ರೆಸ್. ನಮ್ಮಲ್ಲಿ ರಾಷ್ಟ್ರೀಯ ಅಧ್ಯಕ್ಷರೆ ಹೈಕಮಾಂಡ್. ಹಾಗಾಗಿ ಕಾಂಗ್ರೆಸ್ಗೂ ಬಿಜೆಪಿ.ಗೂ ತುಲನೆ ಮಾಡಿ ನೋಡಬೇಕಿದೆ ಎಂದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿರವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿರುವುದರಿಂದ ಪ್ರಪಂಚವೆ ನಮ್ಮ ದೇಶದತ್ತ ತಿರುಗಿ ನೋಡುವಂತಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಅಧಿಕಾರವನ್ನು ಹಿಡಿಯಬೇಕಾಗಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಸಿದ್ದರಾಗಬೇಕು. ನಾನು ವಿರೋಧ ಪಕ್ಷದಲ್ಲಿದ್ದರು ಅನುದಾನ ಹೇಗೆ ತರಬೇಕೆಂಬ ಗಡಸು ಇಟ್ಟುಕೊಂಡಿರುವುದರಿಂದ ದಿನನಿತ್ಯವೂ ತಾಲ್ಲೂಕಿನಲ್ಲಿ ಒಂದಲ್ಲ ಒಂದು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ತಾಲ್ಲೂಕಿನಾದ್ಯಂತ ಕೆರೆಗಳನ್ನು ತುಂಬಿಸಲಾಗುವುದು. ಅಡಿಕೆ ತೋಟಗಳು ಒಣಗಬಾರದೆಂದು ವಿದ್ಯುತ್ ಪವರ್ ಸ್ಟೇಷನ್ಗಳನ್ನು ಕಟ್ಟಿಸುತ್ತಿದ್ದೇನೆ. ಹಿರಿಯೂರಿನ ವಾಣಿವಿಲಾಸಸಾಗರದಿಂದ ಶುದ್ದವಾದ ಕುಡಿಯುವ ನೀರು ಪ್ರತಿ ಮನೆಗಳಿಗೆ ಪೂರೈಸಲಾಗುವುದು. ಎಲ್ಲಾ ಕಡೆ ಸಿ.ಸಿ.ರಸ್ತೆಗಳನ್ನು ಮಾಡಿಸಿದ್ದೇನೆ. ಹೊಳಲ್ಕೆರೆ ಮಂಡಲ ನೂತನ ಅಧ್ಯಕ್ಷರು ಕಾರ್ಯಕರ್ತರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವಂತೆ ಸೂಚಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಹೊಳಲ್ಕೆರೆ ಮಂಡಲ ನೂತನ ಅಧ್ಯಕ್ಷ ಡಿ.ಬಿ.ಕುಮಾರಣ್ಣ, ಭರಮಸಾಗರ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಮಾಜಿ ಮಂಡಲ ಅಧ್ಯಕ್ಷ ಸಿದ್ದೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ರೈತ ಮೋರ್ಚ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಅನಿತ್ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಮಹೇಶಣ್ಣ, ತಿಪ್ಪೇಸ್ವಾಮಿ, ಪಾರ್ವತಮ್ಮ, ಪುರಸಭೆ ಮಾಜಿ ಸದಸ್ಯರುಗಳಾದ ಆರ್.ಎ.ಅಶೋಕ್, ಮುರುಗೇಶ್, ಮಲ್ಲಿಕಾರ್ಜುನ್
ಬಸವರಾಜ್ ಯಾದವ್, ದೇವರಾಜ್, ಜಗದೀಶ್, ಲವಕುಮಾರ್, ಮಾರುತೇಶ್, ಸರಸ್ವತಿ, ರುದ್ರಮ್ಮ, ರೂಪ ಸುರೇಶ್, ಡಿ.ಸಿ.ಮೋಹನ್, ಹೊಳಲ್ಕೆರೆ ಮಂಡಲದ ಎಲ್ಲಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

































