ಕೆಲಸ ಹುಡುಕಲೆಂದು ಮನೆಯಿಂದ ಹೊರಹೋಗಿದ್ದ 19 ವರ್ಷದ ಯುವತಿ ಝಕಿಯಾ ಮುಲ್ಲಾ ಶವ ಧಾರವಾಡ ನಗರದ ಹೊರಹೊಲಯದ ಮನಸೂರು ರಸ್ತೆಯ ಡೈರಿ ಬಳಿ ಪತ್ತೆಯಾಗಿದ್ದು,
ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಸುತ್ತಿದ್ದ ಪ್ರಿಯಕರ ಸಾಬೀರ್ ಮುಲ್ಲಾನೇ ಝಕಿಯಾಳನ್ನು ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದರಿಂದ ಮನೆಯವರು ಸಹ ಮದುವೆಗೆ ಒಪ್ಪಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಲು ತೀರ್ಮಾನಿಸಿದ್ದರು. ಆದ್ರೆ, ಇದೀಗ ಯುವತಿಯನ್ನು ಮದುವೆಯಾಗಬೇಕಿದ್ದ ಸಾಬೀರ್ ಮುಲ್ಲಾ ಎನ್ನುವವನೇ ವೇಲ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝಕಿಯಾ ಮತ್ತು ಸಾಬೀರ್ ಮುಲ್ಲಾ ಸಂಬಂಧಿಕರಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ಮಾತುಕತೆ ನಡೆಸಿದ್ದರು.
ಜನವರಿ 20ರ ಸಂಜೆ ಇಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಸಾಬೀರ್, ವೇಲ್‌ನಿಂದಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಘಾತಕಾರಿ ವಿಚಾರವೆಂದರೆ, ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಸಾಬೀರ್ ಮುಲ್ಲಾ ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದ.
ಆ ನಂತರ ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದ. ಆದರೆ, ಆತನ ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು ,ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ಸಾಬೀರ್ ಮುಲ್ಲಾನನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

































