ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ ಬಳ್ಳಾರಿ ಬ್ಯಾನರ್ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಪ್ರಕರಣ ಮಾಸುವ ಮುನ್ನವೇ ಬಳ್ಳಾರಿಯಲ್ಲಿ ಮತ್ತೊಂದು ಕೃತ್ಯ ನಡೆದಿದೆ.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಸೇರಿದ ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕಾಂಗ್ರೆಸ್ನವರೇ ಬೆಂಕಿ ಹಚ್ಚಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಈ ಪ್ರಕರಣ ಮತ್ತೆ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆಗಳಿವೆ.
ಕಂಟೋನೆಂಟ್ ಪ್ರದೇಶದ ತಮ್ಮ ಮಾಲೀಕತ್ವದ ಜಿ-ಸ್ಟ್ರಾರ್‌ಲೇಔಟ್‌ನಲ್ಲಿ ಜನಾರ್ದನ ರೆಡ್ಡಿ ಸುಮಾರು 73 ಕೋಟಿ ವೆಚ್ಚದಲ್ಲಿ ಮಾದರಿ ಮನೆ ನಿರ್ಮಿಸಿದ್ದರು. ಲೇಔಟ್‌ನಲ್ಲಿ ಮಾದರಿ ಮನೆಗಳನ್ನು ನಿರ್ಮಿಸುವ ಸಂಬಂಧ ಗ್ರಾಹಕರಿಗೆ ತೋರಿಸಲು ಈ ಮನೆ ನಿರ್ಮಿಸಲಾಗಿತ್ತು.
ಶುಕ್ರವಾರ ಸಂಜೆ ದುಷ್ಕರ್ಮಿಗಳು ಸ್ಥಳಕ್ಕೆ ತೆರಳಿ, ರೆಡ್ಡಿಯ ಮಾಡೆಲ್ ಹೌಸ್‌ನ ಬಾಗಿಲು, ಕಿಟಕಿಗಳನ್ನು ಮುರಿದು ಹಾಕಿದ್ದು, ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಬಳಿಕ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಹೊತ್ತಿಗೆ ಮನೆಯ ಕಿಟಕಿಗಳು, ಕಂಬಗಳು ಸೇರಿದಂತೆ ಕಟ್ಟಿಗೆಯಿಂದ ತಯಾರಿಸಿದ ವಸ್ತುಗಳು ಅಗ್ನಿಗಾಹುತಿಯಾಗಿವೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಕುಮಾರ್‌ಸೇರಿ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಜನಾರ್ದನ ರೆಡ್ಡಿ ಮಾಡಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾದ ಯುವಕನ ಫೋಟೋ ವನ್ನು ಮಾಧ್ಯಮಗಳಿಗೆ ತೋರಿಸಿದರು.
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ನಡೆದು ಗುಂಡಿನ ದಾಳಿ ನಡೆದ 23 ದಿನಗಳ ಬಳಿಕ ಈ ಘಟನೆ ನಡೆದಿದ್ದು, ಮತ್ತೊಂದು ಸುತ್ತಿನ ಆರೋಪ- ಪ್ರತ್ಯಾರೋಪಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿ ರುವ ಶಾಸಕ ಜನಾರ್ದನ ರೆಡ್ಡಿ ಸಹೋದರ ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರೇ ಜನಾರ್ದನ ರೆಡ್ಡಿ ಮನೆಗೆ ಬೆಂಕಿ ಹಚ್ಚಿಸಿದ್ದಾರೆ. ಬ್ಯಾನರ್‌ಗಲಭೆ ವೇಳೆ ಜನಾರ್ದನ ರೆಡ್ಡಿಯ ಮನೆಯನ್ನು ಸುಟ್ಟುಹಾಕು ವುದಾಗಿ ಹೇಳಿದ್ದರು. ಜನಾರ್ದನ ರೆಡ್ಡಿಯ ನಿವಾಸ ಸುಟ್ಟು ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ, ಮಾಡಲ್ ಹೌಸ್‌ಗೆ ಬೆಂಬಲಿಗರ ಮೂಲಕ ಬಳ್ಳಾರಿಯ ಭಸ್ಮಾಸುರ ಬೆಂಕಿ ಹಚ್ಚಿಸಿದ್ದಾರೆ ಎಂದು ಕಿಡಿಕಾರಿದರು.
ರೆಡ್ಡಿ ನಿವಾಸಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಎಸ್ಪಿಗೆ ದೂರು ನೀಡುವುದಾಗಿ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಏತನ್ಮಧ್ಯೆ, ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಆರೋಪಿಗಳ ಗುರ್ತಿಸಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮತ್ತಷ್ಟು ಅಹಿತಕರ ಘಟನೆಗಳನ್ನು ತಡೆಗಟ್ಟಲು ಬಳ್ಳಾರಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರಕರಣ ಸಂಬಂಧ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































