ಬೆಂಗಳೂರು : ಬೆಂಗಳೂರು ಜೀವನಕ್ಕೆ ಒಮ್ಮೆ ಹೊಂದಿಕೊಂಡ ಬಳಿಕ ಅದನ್ನು ಬಿಟ್ಟು ಹೋಗುವುದು ಸುಲಭದ ಮಾತಲ್ಲ. ವಿಶೇಷವಾಗಿ ಇಲ್ಲಿ ಹುಟ್ಟಿ, ಬೆಳೆದವರಿಗೆ ಈ ನಗರ ಕೇವಲ ವಾಸಸ್ಥಳವಲ್ಲ, ಜೀವನದ ಭಾಗವೇ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬಿಗಡಾಯಿಸುತ್ತಿರುವ ಟ್ರಾಫಿಕ್, ಧೂಳು ಮಾಲಿನ್ಯ ಮತ್ತು ಜೀವನದ ಒತ್ತಡದಿಂದಾಗಿ ಅನೇಕರು ನಗರ ತೊರೆಯುವ ಬಗ್ಗೆ ಯೋಚಿಸುತ್ತಿದ್ದಾರೆ.
ಈ ಸಾಲಿಗೆ ಇದೀಗ 41 ವರ್ಷದ ಉದ್ಯಮಿಯೊಬ್ಬರೂ ಸೇರಿದ್ದಾರೆ. ಕಳೆದ ಒಂದು ವರ್ಷದಿಂದ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್ಗಳು ಮತ್ತು ಧೂಳು ಮಾಲಿನ್ಯ ತನ್ನ ಆರೋಗ್ಯ ಹಾಗೂ ಮನಶಾಂತಿಗೆ ಹಾನಿ ಮಾಡುತ್ತಿವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
“ನಾನು ಹುಟ್ಟಿ ಬೆಳೆದ ಬೆಂಗಳೂರಿಗೆ ವಿದಾಯ ಹೇಳುವ ಸಮಯ ಬಂದಿದೆ. 41 ವರ್ಷದವನಾಗಿ ನನ್ನ ಸ್ವಂತ ವ್ಯವಹಾರ ನಡೆಸುತ್ತಿದ್ದೇನೆ. ಆದರೆ ಕಳೆದ ಒಂದು ವರ್ಷದಿಂದ ಟ್ರಾಫಿಕ್, ಧೂಳು ಮಾಲಿನ್ಯ ಮತ್ತು ಹೆಚ್ಚಿದ ಒತ್ತಡ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕುವ ತೆರಿಗೆದಾರರು ಹಾಗೂ ಉದ್ಯೋಗಿಗಳ ಸ್ಥಿತಿ ನೋಡಿ ನೋವಾಗುತ್ತದೆ. ಕುಟುಂಬದೊಂದಿಗೆ ನೆಮ್ಮದಿಯ ಜೀವನಕ್ಕಾಗಿ ಬೇರೆಡೆಗೆ ಸ್ಥಳಾಂತರವಾಗಲು ನಿರ್ಧರಿಸಿದ್ದೇನೆ” ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ನಾನು ಬೆಂಗಳೂರನ್ನು ದ್ವೇಷಿಸುತ್ತೇನೆ ಎಂದಲ್ಲ. ಆದರೆ ಈ ಪರಿಸ್ಥಿತಿಯಿಂದ ಜನರು ನಗರವನ್ನು ತೊರೆಯುತ್ತಿದ್ದಾರೆ ಎಂಬ ಸತ್ಯವನ್ನು ಸರ್ಕಾರ ಗಮನಿಸಬೇಕು. ನನ್ನ ನಿರ್ಧಾರ ಸರ್ಕಾರಕ್ಕೆ ಒಂದು ಎಚ್ಚರಿಕೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಪೋಸ್ಟ್ಗೆ ಅನೇಕ ನೆಟ್ಟಿಗರು ಸಹಮತ ವ್ಯಕ್ತಪಡಿಸಿದ್ದು, ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ನಾನೂ ಕೂಡ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರವಾಗುವ ಯೋಚನೆ ಮಾಡಿದ್ದೇನೆ. ನನ್ನ ಕೆಲ ಸಹೋದ್ಯೋಗಿಗಳು ಮತ್ತು ಕುಟುಂಬದವರು ಈಗಾಗಲೇ ಅದೇ ಕಾರಣಕ್ಕೆ ಅಲ್ಲಿಗೆ ಹೋಗಿದ್ದಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಟ್ರಾಫಿಕ್ ಅನ್ನು ಸಹಿಸಿಕೊಳ್ಳಬಹುದು, ಆದರೆ ಧೂಳು, ಕಸ, ಮಣ್ಣು ತುಂಬಾ ಕಾಡುತ್ತಿದೆ. ನಗರ ಇಷ್ಟು ಅಸಮರ್ಪಕವಾಗಿ ಹಾಗೂ ನಿರ್ಲಕ್ಷ್ಯದಿಂದ ಎಂದಿಗೂ ಕಾಣಿಸಿಕೊಂಡಿರಲಿಲ್ಲ. ಪಾನ್ ಮತ್ತು ಗುಟ್ಕಾ ಕಲೆಗಳ ಸಮಸ್ಯೆಯೂ ಇಷ್ಟು ಗಂಭೀರವಾಗಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಪ್ರತಿಕ್ರಿಯೆಗಳನ್ನು ಗಮನಿಸಿದ ಉದ್ಯಮಿ, ಅಂತಿಮವಾಗಿ ಮಂಗಳೂರನ್ನು ತಮ್ಮ ಹೊಸ ವಾಸಸ್ಥಳವಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

































