ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ₹400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನೇ ಹೈಜಾಕ್ ಮಾಡಿರುವುದು ಇತಿಹಾಸದಲ್ಲೇ ಬೆಚ್ಚಿ ಬೀಳಿಸುವ ಅತಿದೊಡ್ಡದಾದ ದರೋಡೆ ಪ್ರಕರಣ ಇದಾಗಿದೆ ಎಂದೇ ಹೇಳಲಾಗುತ್ತಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಈ ಮೂರು ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನೇ ಈ ಘಟನೆ ಅಲರ್ಟ್ ಮಾಡಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು ₹400 ಕೋಟಿ ನಗದು ತುಂಬಿದ್ದ ಎರಡು ಕಂಟೇನರ್‌ಗಳು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಹೈಜಾಕ್ ಆಗಿರುವುದು ಇದೀಗ ಬಹಿರಂಗವಾಗಿದೆ. 2025ರ ಅಕ್ಟೋಬರ್ 16ರಂದು ಈ ದರೋಡೆ ನಡೆದಿದೆ. ಘಟನೆ ನಡೆದು ಹಲವಾರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿರುವುದು ಮೂರು ರಾಜ್ಯಗಳ ಪೊಲೀಸರಲ್ಲಿ ತೀವ್ರ ಅಚ್ಚರಿಯನ್ನುಂಟು ಮಾಡಿದೆ. ಜತೆಗೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಭಾರೀ ಮೊತ್ತದ ಹಣವು ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ್ದು ಎಂಬ ಮಾಹಿತಿ ಮಹಾರಾಷ್ಟ್ರದ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ ಎರಡು ಕಂಟೇನರ್‌ಗಳು, ಖಾನಾಪುರ ತಾಲೂಕಿನ ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಏಕಾಏಕಿ ನಾಪತ್ತೆಯಾಗಿವೆ. ಈ ಕಂಟೇನರ್‌ಗಳಲ್ಲಿ ₹400 ಕೋಟಿಗೂ ಅಧಿಕ ನಗದು ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಇದೀಗ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

































