ಚಿತ್ರದುರ್ಗ: ಮುಂಬರುವ ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ ಐತಿಹಾಸಿಕ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆ. ಮಾರ್ಚ್ 06 ರಂದು ದೊಡ್ಡ ರಥೋತ್ಸವ ನಡೆಯಲಿದ್ದು, ಅತ್ಯಂತ ವಿಜೃಂಭಣೆ ಮತ್ತು ಭಕ್ತಿಪೂರ್ವಕ ಹಾಗೂ ಶಿಸ್ತುಬದ್ಧವಾಗಿ ರಥೋತ್ಸವ ಜರುಗಿಸಲು ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ರಾಜ್ಯ ಯೋಜನೆ, ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಒಳಮಠದ ಆವರಣದಲ್ಲಿ ಸೋಮವಾರ ಜರುಗಿದ ನಾಯಕನಹಟ್ಟಿ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆರೆ ಹೊರೆಯ ರಾಜ್ಯಗಳೂ ಸೇರಿದಂತೆ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದರಿಂದ, ಯಾವುದೇ ಸಣ್ಣ ಲೋಪ-ದೋಷಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಭಕ್ತಾದಿಗಳಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ತುರ್ತು ವೈದ್ಯಕೀಯ ಸೇವೆಗಳಲ್ಲಿ ಯಾವುದೇ ಕೊರತೆಯಾಗದಂತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಜಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ಮೊಳಕಾಲ್ಮೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮುಂಬರುವ ಐತಿಹಾಸಿಕ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳ ಒದಗಿಸುವುದಾಗಿ ಭರವಸೆ ನೀಡಿದರು.
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ 10 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಘೋಷಿಸಿದ ಶಾಸಕ ಗೋಪಾಲಕೃಷ್ಣ ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಸರ್ಕಾರಿ ಅನುದಾನ ವಿಳಂಬವಾದರೆ, ವೈಯಕ್ತಿಕವಾಗಿಯಾದರೂ ಈ ಮೊತ್ತವನ್ನು ಭರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ಜಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಮತ್ತು ಪೆÇೀಸ್ಟರ್ಗಳನ್ನು ಅಳವಡಿಸಿ ಪಟ್ಟಣದ ಅಂದಗೆಡಿಸುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸೂಚಿಸಿದರು.
ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ, ಮಾರ್ಚ್ ತಿಂಗಳ ಬಿಸಿಲನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಮಾತನಾಡಿ, ನಾಯಕನಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ವಿವಿಧ ರಸ್ತೆಗಳಲ್ಲಿ ತಗ್ಗು ಗುಂಡಿಗಳಿದ್ದು, ಲೋಕೋಪಯೋಗಿ ಇಲಾಖೆಯವರು ಈ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ದುರಸ್ತಿಪಡಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಜಾತ್ರೆಯ ಒಳಗಾಗಿ ಎಲ್ಲ ರಸ್ತೆಗಳು ಅಚ್ಚುಕಟ್ಟಾಗಿರಬೇಕು ಎಂದು ಸೂಚನೆ ನೀಡಿದರು.

































