ಬೆಂಗಳೂರು : ಮೇಕಪ್ ಎಂದರೆ ಕೇವಲ ಸೌಂದರ್ಯ ಹೆಚ್ಚಿಸುವ ಸಾಧನ ಮಾತ್ರವಲ್ಲ, ಆತ್ಮವಿಶ್ವಾಸಕ್ಕೂ ಕಾರಣ ಎನ್ನಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಪ್ರಕರಣವೊಂದು ಈ ಮಾತಿಗೆ ತದ್ವಿರುದ್ಧದ ಅರ್ಥ ನೀಡಿದೆ. ಜನರ ನಂಬಿಕೆ ಗೆಲ್ಲಲು ಹಾಗೂ ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡಲು ಮೇಕಪ್ನನ್ನೇ ಅಸ್ತ್ರವಾಗಿ ಬಳಸುತ್ತಿದ್ದ ದಂಪತಿಯನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗಾಯತ್ರಿ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದ್ದು, ಇವರಿಂದ ಸುಮಾರು 60 ಲಕ್ಷ ರೂ. ಮೌಲ್ಯದ 398 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಾತ್ರೆ–ದೇಗುಲಗಳೇ ಟಾರ್ಗೆಟ್ : ಆರೋಪಿತ ಗಾಯತ್ರಿ ತನ್ನ ಪತಿಯೊಂದಿಗೆ ರಾಜ್ಯದ ವಿವಿಧ ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವಸ್ಥಾನಗಳಿಗೆ ತೆರಳಿ, ಅಲ್ಲಿ ಭಕ್ತರ ಮಧ್ಯೆ ಬೆರೆತು ಕೈಚಳಕ ತೋರಿಸುತ್ತಿದ್ದಳು. ವಿಶೇಷವಾಗಿ ಮಹಿಳೆಯರ ಬಳಿ ಸುಳಿದಾಡಿ, ಅವರಿಗೆ ತಿಳಿಯದಂತೆ ಮೈಮೇಲಿದ್ದ ಚಿನ್ನಾಭರಣವನ್ನು ಕದಿಯುವುದರಲ್ಲಿ ಆಕೆ ನಿಪುಣಳಾಗಿದ್ದಳು ಎನ್ನಲಾಗಿದೆ.
ತಿಂಗಳಿಗೆ 5 ಲಕ್ಷ ರೂ. ಮೇಕಪ್ಗೆ ಖರ್ಚು! : ಪೊಲೀಸರ ತನಿಖೆಯಲ್ಲಿ ಹೊರಬಂದ ಅಚ್ಚರಿಯ ಸಂಗತಿ ಎಂದರೆ, ಗಾಯತ್ರಿ ತನ್ನ ಮೇಕಪ್ ಮತ್ತು ಲುಕ್ಗಾಗಿ ತಿಂಗಳಿಗೆ ಸುಮಾರು 5 ಲಕ್ಷ ರೂ. ಖರ್ಚು ಮಾಡುತ್ತಿದ್ದಳು. ದುಬಾರಿ ಬ್ಯೂಟಿ ಪಾರ್ಲರ್ಗಳಲ್ಲಿ ಒಂದೇ ಬಾರಿ 25 ರಿಂದ 30 ಸಾವಿರ ರೂ.ವರೆಗೆ ಹಣ ಪಾವತಿಸಿರುವ ದಾಖಲೆಗಳು ಪತ್ತೆಯಾಗಿವೆ. ಆರೋಪಿತೆಯ ಮೊಬೈಲ್ನಲ್ಲಿರುವ ಹಣಕಾಸು ವ್ಯವಹಾರಗಳನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
ಶೋಕಿ ಜೀವನಕ್ಕೆ ಕಳ್ಳತನದ ಹಣ : ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ, ಅದರಿಂದ ಬೇರೆ ಆಭರಣಗಳನ್ನು ಖರೀದಿ ಮಾಡಿ ಬ್ಯಾಂಕ್ನಲ್ಲಿ ಇಡುವುದು ಅಥವಾ ಮರುಮಾರಾಟ ಮಾಡುವುದೇ ಇವರ ರೂಢಿ. ಈ ಹಣದಿಂದ ಐಫೋನ್, ಬ್ರಾಂಡೆಡ್ ಬಟ್ಟೆಗಳು, ಮಾಲ್ಗಳಲ್ಲಿ ಶಾಪಿಂಗ್ ಮಾಡಿ ದಂಪತಿ ಐಶಾರಾಮಿ ಜೀವನ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ವಿಚಾರಣೆ ವೇಳೆ ಗಾಯತ್ರಿ ನೀಡಿದ ಹೇಳಿಕೆ ಇನ್ನಷ್ಟು ಶಾಕಿಂಗ್ ಆಗಿದೆ. “ಅಂದವಾಗಿ ಮೇಕಪ್ ಮಾಡಿಕೊಂಡು, ದುಬಾರಿ ಸೀರೆ ಉಟ್ಟು ದೇವಸ್ಥಾನ ಅಥವಾ ಜಾತ್ರೆಗೆ ಹೋದರೆ ಯಾರೂ ಅನುಮಾನ ಪಡುವುದಿಲ್ಲ. ಅದಕ್ಕಾಗಿಯೇ ಮೇಕಪ್ ಇಲ್ಲದೆ ಮನೆ ಹೊರಗೆ ಬರುತ್ತಿರಲಿಲ್ಲ” ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ. ಪ್ರಸ್ತುತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

































