ಮುಂಬೈ : ಮಹಾರಾಷ್ಟ್ರದ ಡಿಸಿಎಂ ಹಾಗೂ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರ ಹಠಾತ್ ನಿಧನದ ಬೆನ್ನಲ್ಲೇ ಅವರ ಪತ್ನಿ ಸುನೇತ್ರಾ ಪವಾರ್ ಡಿಸಿಎಂ ಆಗಿ ನೇಮಿಸಲು ಪಕ್ಷ ನಿರ್ಧರಿಸಿದೆ.
ಇಂದು ಮಧ್ಯಾಹ್ನ ಮುಂಬೈನಲ್ಲಿ ನಡೆಯುವ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಆ ಬಳಿಕ ಅವರು ಡಿಸಿಎಂ ಸ್ಥಾನಕ್ಕೆ ಹಕ್ಕು ಮಂಡಿಸಲಿದ್ದು, ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಅಜಿತ್ ಪವಾರ್ ವಹಿಸಿಕೊಂಡಿದ್ದ ಹಣಕಾಸು, ಅಬಕಾರಿ ಹಾಗೂ ಕ್ರೀಡಾ ಸೇರಿದಂತೆ ಪ್ರಮುಖ ಖಾತೆಗಳನ್ನು ಸುನೇತ್ರಾ ಪವಾರ್ ಅವರು ಮುಂದುವರೆಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಶುಕ್ರವಾರ ಎನ್ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯಾಧ್ಯಕ್ಷ ಸುನಿಲ್ ತಟಕರೆ, ಸಚಿವ ಛಗನ್ ಭುಜಬಲ್ ಹಾಗೂ ಮಾಜಿ ಸಚಿವ ಧನಂಜಯ ಮುಂಡೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಈ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು. ಜೊತೆಗೆ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ.

































