ಚೀನಾ : ಹೆರಿಗೆ ಅನ್ನೋದು ಒಬ್ಬ ತಾಯಿಗೆ ಮರು ಜನ್ಮ ಪಡೆದಂತೆ ಎಂಬ ಮಾತಿದೆ. ಆದ್ರೆ ಚೀನಾದಲ್ಲಿ ಮನೆಯಲ್ಲಿಯೇ ತಾಯಿಗೆ 13 ವರ್ಷದ ಬಾಲಕನೊಬ್ಬ ಹೆರಿಗೆ ಮಾಡಿಸಿದ ಪ್ರಕರಣ ನಡೆದಿದೆ. ತನ್ನ ತಾಯಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಾಗ, ಹದಿಹರೆಯದ ಬಾಲಕನು ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಯಿಂದ ನೈಜ-ಸಮಯದ ಸೂಚನೆಗಳನ್ನು ಪಡೆದು ಹೆರಿಗೆ ಮಾಡಿಸಿದ್ದಾನೆ ಎನ್ನಲಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಘಟನೆ ಬಗ್ಗೆ ವರದಿ ಮಾಡಿದೆ. ಇದು ಈಗ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
37 ವಾರಗಳ ಗರ್ಭಿಣಿಯಾಗಿರುವ ತಾಯಿಗೆ ನೀರು ಸೋರಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದ ವೇಳೆ ಬಾಲಕ ತುರ್ತು ಕೇಂದ್ರಕ್ಕೆ ಕರೆ ಮಾಡಿದ್ದಾನೆ. ಮಗುವಿನ ತಲೆ ಹೊರಗೆ ಬಂದಿದೆ ಎಂದು ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾನೆ. ಇದನ್ನು ಕೇಳಿಸಿಕೊಂಡು ತಾಯಿಯ ಯೋಗಕ್ಷೇಮದ ಬಗ್ಗೆ ಭಯಭೀತರಾದ ವೈದ್ಯರು ಕೆಲವು ಮಾರ್ಗದರ್ಶನವನ್ನು ಆ ಬಾಲಕನಿಗೆ ನೀಡಿದ್ದಾರೆ. ಹೀಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.
ಫೋನ್ ಮೂಲಕವೇ ವೈದ್ಯರು ಆಂಬ್ಯುಲೆನ್ಸ್ ಮನೆಗೆ ಬರುವ ವರೆಗೂ ಹುಡುಗನಿಗೆ ಸೂಚನೆ ನೀಡಿದ್ದಾರೆ. ಆ ಸಮಯದಲ್ಲಿ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ಅವರನ್ನು ಶಾಂತಗೊಳಿಸುವುದು ಹೇಗೆ ಮತ್ತು ಮಗುವಿನ ಜನನಕ್ಕೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ವೈದ್ಯರ ಸೂಚನೆಗಳನ್ನು ಕ್ರಮವಾಗಿ ಅನುಸರಿಸಿ, ಹದಿಹರೆಯದ ಹುಡುಗ ಆರೋಗ್ಯವಾಗಿರುವ ಗಂಡು ಮಗುವಿಗೆ ಜನ್ಮ ನೀಡಲು ತನ್ನ ತಾಯಿಗೆ ಹದಿಹರೆಯದ ಬಾಲಕ ಸಹಾಯ ಮಾಡಿದ್ದಾನೆ.
ಇನ್ನು ಹೊಕ್ಕುಳಬಳ್ಳಿಯನ್ನು ಬಿಗಿಗೊಳಿಸುವ ಸಮಯ ಬಂದಾಗ, ಹುಡುಗನಿಗೆ ಸ್ವಚ್ಛವಾದ ದಾರ ಸಿಗದಿದ್ದ ಸಮಯದಲ್ಲಿ ವೈದ್ಯರು ಮಾಸ್ಕ್ ಸ್ಟ್ರಾಪ್ ಬಳಸಲು ಸಲಹೆ ನೀಡಿದ್ದು ಸೋಂಕು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡಿದ್ದಾರೆ. ತದನಂತರ , ವೈದ್ಯಕೀಯ ಸಿಬಂದಿ ಮನೆಗೆ ಬಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಇಬ್ಬರ ಆರೋಗ್ಯವೂ ಚೆನ್ನಾಗಿದೆ ಎಂದು ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.