ಡಮಾಸ್ಕಸ್: ಸಿರಿಯಾದಲ್ಲಿ ಬಂಡುಕೋರರು ನಡೆಸಿದ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ. ಅಸ್ಸಾದ್ ಸರ್ಕಾರ ಪತನಗೊಂಡಿದೆ.
ಅಧ್ಯಕ್ಷ ಮತ್ತು ಅವರ ಕುಟುಂಬಕ್ಕೆ ರಷ್ಯಾ ಆಶ್ರಯ ನೀಡಿದೆ. ಪ್ರತಿಭಟನೆಗಳು ಹೆಚ್ಚಾದಂತೆ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದ ಪಲಾಯನ ಮಾಡುವಂತೆ ಸೂಚಿಸಲಾಗಿತ್ತು.
2011 ರಲ್ಲಿ ಪ್ರಾರಂಭವಾದ ಸಿರಿಯಾದ ಅಂತರ್ಯುದ್ದವು ಡಿಸೆಂಬರ್ 8, 2024 ರಂದು ಬಶರ್ ಅಲ್-ಅಸ್ಸಾದ್ ಅನ್ನು ಬಂಡಾಯ ಪಡೆಗಳಿಂದ ಪದಚ್ಯುತಗೊಳಿಸುವುದರೊಂದಿಗೆ ಕೊನೆಗೊಂಡಿತು.
ಕಳೆದ 12 ವರ್ಷಗಳಿಂದ ಬಶರ್ ಅಸ್ಸಾದ್ ಸರ್ವಾಧಿಕಾರ ವಿರೋಧಿಸಿ ,ಮೂಲಭೂತವಾದಿ ಹಯಾತ್ ತಹ್ರೀರ್ ಅಲ್-ಶಾಮ್ ಸಂಘಟನೆ ನೇತೃತ್ವದಲ್ಲಿ ಆಂತರಿಕ ಯುದ್ದ ನಡೆಸುತ್ತಲೇ ಇತ್ತು.
ಸಿರಿಯಾದಿಂದ ಒಂದೊಂದೇ ನಗರಗಳನ್ನು ವಶಪಡಿಸಿಕೊಳ್ಳುತ್ತಾ ಬಂದು ಕೊನೆಗೆ ಡಮಾಸ್ಕಸ್ ನ್ನು ವಶಪಡಿಸುವುದರೊಂದಿಗೆ ಅಸಾದ್ ಮತ್ತು ಅವರ ತಂದೆ ಸೇರಿದಂತೆ 54 ವರ್ಷದ ಸರ್ವಾಧಿಕಾರದ ಆಡಳಿತಕ್ಕೆ ತೆರೆ ಬಿದ್ದಿದೆ.
ಅಸ್ಸಾದ್ ತಂದೆ ಅತ್ಯಂತ ಕ್ರೂರ ಆಡಳಿತಗಾರನಾಗಿದ್ದರು. ಅವರ ಬಳಿಕ ಬಂದ ಅಸ್ಸಾದ್ ಮೊದಲು ಕೊಂಚ ಸುಧಾರಣಾವಾಧಿಯಂತೆ ಇದ್ದರೂ ಬಳಿಕ ಅವರೂ ತಂದೆಯ ಹಾದಿ ಹಿಡಿದರು. ತಮ್ಮ ಆಡಳಿತವನ್ನು ಪ್ರಶ್ನಿಸಿದವರನ್ನು ಮುಲಾಜಿಲ್ಲದೇ ಕತ್ತಲ ಕೋಣೆಯಲ್ಲಿಟ್ಟು ಥಳಿಸಿ ಕೊನೆಗೆ ನೇಣಿಗೆ ಹಾಕುತ್ತಿದ್ದರು. ಇದೇ ರೀತಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಅಸ್ಸಾದ್ ನೇಣುಗಂಬಕ್ಕೇರಿಸಿದ್ದಾನೆ ಎನ್ನಲಾಗಿದೆ.
ಸರ್ವಾಧಿಕಾರೀ ಆಡಳಿತದಿಂದ ಬೇಸತ್ತಿದ್ದ 14 ವರ್ಷದ ಹುಡುಗ
ಈ ಸರ್ವಾಧಿಕಾರದ ವಿರುದ್ದ ದಂಗೆಯೇಳಲು ಮೂಲ ಕಾರಣವಾಗಿದ್ದು 14 ವರ್ಷದ ಮೊಯಿನ್ ಸ್ಯಾಸ್ನೇಹ್ ಎಂಬ ಬಾಲಕ. ಸರ್ವಾಧಿಕಾರೀ ಆಡಳಿತದಿಂದ ಬೇಸತ್ತಿದ್ದ ಆತ ಗೋಡೆಯ ಮೇಲೆ ನಿಮ್ಮ ಸಮಯ ಬಂದಿದೆ ಡಾಕ್ಟರ್ ಎಂದು ನೇತ್ರ ತಜ್ಞನಾಗಿರುವ ಅಸ್ಸಾದ್ ಕುರಿತು ಬರೆದಿದ್ದ.
ಇದರಿಂದ ರೊಚ್ಚಿಗೆದ್ದ ಅಸ್ಸಾದ್ ಮೊಯಿನ್ ಮತ್ತು ಸ್ನೆಹಿತರನ್ನು 26 ದಿನಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿದ್ದ. ಇದುವೇ ದಂಗೆಗೆ ಮೂಲ ಕಾರಣವಾಯಿತು 2011 ರ ಮಾರ್ಚ್ ನಲ್ಲಿ ಆರಂಭವಾದ ದಂಗೆ ಇಂದು ಕೊನೆಯಾಗಿದ್ದು, ಸಿರಿಯಾ ಈಗ ಬಂಡುಕೋರರ ವಶವಾಗಿದೆ.