ಭುವನೇಶ್ವರ : ಭಾರತ ಮೂಲದ ಸ್ಪೇನ್‌ನ 21 ವರ್ಷದ ಯುವತಿಯೊಬ್ಬರು ಒಂದು ವರ್ಷದ ಮಗುವಾಗಿದ್ದಾಗ ತಮ್ಮನ್ನು ಸಹೋದರನ ಜತೆ ಅನಾಥವಾಗಿಸಿ ಬಿಟ್ಟು ಹೋಗಿದ್ದ ತಾಯಿಯನ್ನು ಹುಡುಕಿಕೊಂಡು ಒಡಿಶಾದ ರಾಜಧಾನಿ ಭುವನೇಶ್ವರಕ್ಕೆ ಮರಳಿ ಬಂದಿದ್ದಾರೆ. ಸ್ಪೇನ್ ಮೂಲದ ಸಾಕು ತಾಯಿ ಗೆಮಾ ವಿಡಾಲ್ ಜತೆಗೂಡಿ ಡಿ. 19 ರಂದು ಭಾರತಕ್ಕೆ ಬಂದಿರುವ ಸ್ನೇಹಾ, ಜನ್ಮ ನೀಡಿದ ತಾಯಿ ಬನಲತಾ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ, 20 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದ ಜನ್ಮ ನೀಡಿದ ಅಮ್ಮನ ಬಗ್ಗೆ ಯಾವುದೇ ಸುಳಿವು ಸಿಗದೆ ನಿರಾಸೆಗೊಂಡಿದ್ದಾರೆ. ಶೈಕ್ಷಣಿಕ ಕಾರಣಕ್ಕಾಗಿ ಸದ್ಯಕ್ಕೆ ಹೆತ್ತಮ್ಮನ ಹುಡುಕಾಟ ನಿಲ್ಲಿಸಿ ಇದೀಗ ಸ್ವದೇಶಕ್ಕೆ ಮರಳಲು ನಿರ್ಧರಿಸಿದ್ದಾರೆ. ಪರೀಕ್ಷೆಗಳು ಮುಗಿದ ಬಳಿಕ ಮಾರ್ಚ್ ತಿಂಗಳಲ್ಲಿ ಮತ್ತೆ ಹುಡುಕಾಟ ಮುಂದುವರಿಸಲು ಭಾರತಕ್ಕೆ ಮರಳಿ ಬರುವ ನಿರ್ಧಾರ ಮಾಡಿದ್ದಾರೆ. ಕಳೆದ 15 ದಿನಗಳಿಂದ ತಾಯಿಗಾಗಿ ಹುಡುಕಾಟ ನಡೆಸಿದ ಸ್ನೇಹಾ ಅವರ ನೆರವಿಗೆ ರಮಾದೇವಿ ಮಹಿಳಾ ವಿವಿಯ ನಿವೃತ್ತ ಶಿಕ್ಷಕಿ ಸ್ನೇಹಾ ಸುಧಾಮಿಶ್ರಾ ಬಂದಿದ್ದಾರೆ.
ಅವರ ತಾಯಿ ವಾಸವಿದ್ದ ಮನೆಯ ಮಾಲಿಕ ಹಾಗೂ ಪೊಲೀಸರ ಸಹಾಯದಿಂದ ಹೆತ್ತವರ ಕುರಿತು ಒಂದಿಷ್ಟು ಮಾಹಿತಿ ಪಡೆದುಕೊಂಡಿದ್ದಾರೆ. ಭುನವೇಶ್ವರ ಪೊಲೀಸ್ ಕಮಿಷನರ್‌ಗೆ ವಿಷಯ ತಿಳಿಸಿ ಪೋಷಕರನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈ ನಡುವೆ ಬನಲತಾ ದಾಸ್ ಹಾಗೂ ಸಂತೋಷ್ ದಾಸ್ ಪತ್ತೆಗೆ ಪೊಲೀಸರ ವಿಶೇಷ ತಂಡ ಮುಂದಾಗಿದೆ.