ಕೊಪ್ಪಳ : ಅಂಗನವಾಡಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಅಲಿಯಾ ಮಹ್ಮದ್ ರಿಯಾಜ್ (5) ಮೃತ ಬಾಲಕಿ.
ಸೋಮವಾರ ಮುಂಜಾನೆ ಪ್ರತಿನಿತ್ಯದಂತೆ ಬಾಲಕಿ ಅಂಗನವಾಡಿಗೆ ಹೋಗಿದ್ದಳು. ಮುಂಜಾನೆ ಉಪಹಾರ ಸೇವಿಸಿದ್ದ ಬಾಲಕಿ ಚಟುವಟಿಕೆಯಿಂದಲೇ ಇದ್ದಳು. ಅಂಗನವಾಡಿಯಲ್ಲಿ ಎಲ್ಲ ಮಕ್ಕಳಂತೆ ಆಟವಾಡಿಕೊಂಡಿದ್ದಳು. ಆದರೆ, ಮಧ್ಯಾಹ್ನ ಆಟವಾಡುತ್ತಿದ್ದಾಗ ದಿಢೀರನೆ ಕುಸಿದು ಬಿದ್ದಿದ್ದಾಳೆ. ಪೀಟ್ಸ್ ಬಂದವರಂತೆ ಆಡಿದ್ದಾಳೆ.
ಬಾಲಕಿಯನ್ನು ನೋಡಿ ಅಂಗನವಾಡಿ ಸಹಾಯಕಿ ಓಡಿ ಬಂದಿದ್ದು, ಕೂಡಲೇ ಪಾಲಕರಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಆಕೆಯನ್ನು ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಬಳಿಕ ತಪಾಸಣೆ ಮಾಡಿದ ವೈದ್ಯರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.