ಬೆಂಗಳೂರು: ಹೆಚ್ಚಿನ ಭದ್ರತೆ ಇರುವ ಸ್ಥಳವಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ, ಕೈಚೀಲದಲ್ಲಿದ್ದ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ನಗದು ಸಹಿತ ಕಚೇರಿಯಲ್ಲೇ ಮರೆತು ಹೋಗಿದ್ದರು. ಮಾರನೇ ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಕೈಚೀಲ ನಾಪತ್ತೆಯಾಗಿತ್ತು.
ತಕ್ಷಣ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ, ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ಹೊತ್ತುಕೊಂಡು ಹೋಗಿರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಪೊಲೀಸರು ಆರೋಪಿ ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
































