ಶಿವಮೊಗ್ಗ: ಯುವತಿಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡು ಶಿವಮೊಗ್ಗದ ಉದ್ಯಮಿಯೊಬ್ಬರು 14.48 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಅಂಜಲಿ ಶರ್ಮಾ ಎಂಬ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದಕ್ಕೆ ಶಿವಮೊಗ್ಗದ ಉದ್ಯಮಿ ಒಪ್ಪಿಗೆ ನೀಡಿದ್ದರು. ಆಕೆ ಉದ್ಯಮಿಗೆ ಮೆಸೇಜ್ ಮಾಡಿ, ಮುಂಬೈನಲ್ಲಿ ತಮ್ಮದು ಚಿನ್ನದ ಉದ್ಯಮವಿದೆ. ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದ್ದಳು. ಅಲ್ಲದೆ ವಾಟ್ಸಪ್‌ನಲ್ಲಿ ಲಿಂಕ್ ಕೂಡ ರವಾನಿಸಿದ್ದಳು.
ಆಕೆಯ ಮಾತು ನಂಬಿದ ಉದ್ಯಮಿ ಲಿಂಕ್ ಕ್ಲಿಕ್ ಮಾಡಿ, ಹೂಡಿಕೆ ಮಾಡಿದ್ದರು. ತನ್ನ ಪುತ್ರ ಮತ್ತು ಸ್ನೇಹಿತನ ಬ್ಯಾಂಕ್ ಖಾತೆಯಿಂದಲೂ ಹಣ ವರ್ಗಾಯಿಸಿದ್ದರು. ಒಟ್ಟು 14.48 ಲಕ್ಷ ರೂ. ಹೂಡಿಕೆ ಮಾಡಿದ್ದಾಗಿ ಹೇಳಿದ್ದಾರೆ. ಬಳಿಕ ತಮ್ಮ ಹಣವನ್ನು ವಿತ್‌ಡ್ರಾ ಮಾಡಲು ಯತ್ನಿಸಿದಾಗ 23 ಲಕ್ಷ ರೂ. ತೆರಿಗೆ ಪಾವತಿಸುವಂತೆ ಸೂಚಿಸಲಾಯಿತು. ಅನುಮಾನಗೊಂಡು ವಿಚಾರಿಸಿದಾಗ ತಾನು ವಂಚನೆಗೊಳಗಾಗಿರುವುದು ಉದ್ಯಮಿಗೆ ಅರಿವಾಯಿತು. ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.