ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಗರದ ವಿವಿಧೆಡೆ ಬಾಂಬ್ ಸ್ಫೋಟವಾಗಲಿದೆ ಎಂದು ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 9ರಂದು ಸಂಜೆ 5:30ರ ಸುಮಾರಿಗೆ ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ಕಂಟ್ರೊಲ್ ರೂಮ್ಗೆ ಕರೆ ಮಾಡಿದ್ದ ಅಪರಿಚಿತ, ”ಆರು ಜನರ ಹೆಸರು ಹಾಗೂ ವಿಳಾಸಗಳನ್ನ ತಿಳಿಸಿ, ರಾಮೇಶ್ವರಂ ಕೆಫೆಯಲ್ಲಿ ಈ ಹಿಂದೆ ಬಾಂಬ್ ಸ್ಫೋಟವಾದಂತೆ ಆರು ಜನರು ಗಣರಾಜ್ಯೋತ್ಸವದ ದಿನ ನಗರದ ವಿವಿಧೆಡೆ ಬಾಂಬ್ ಸ್ಫೋಟಿಸಲು ಉದ್ದೇಶಿಸಿದ್ದಾರೆ” ಎಂದು ಹೇಳಿದ್ದಾನೆ.
ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಎಂದು ಕಂಡುಬಂದಿದ್ದು, ಪೊಲೀಸ್ ಕಂಟ್ರೋಲ್ ರೂಮ್ ಪಿಎಸ್ಐ ಓರ್ವರು ನೀಡಿರುವ ದೂರಿನನ್ವಯ ಅಪರಿಚಿತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ ಆರೋಪಿ ನೀಡಿದ ಹೆಸರು ಮತ್ತು ವಿಳಾಸಗಳ ಸತ್ಯಾಸತ್ಯತೆಯ ಕುರಿತು ಸಂಬಂಧಪಟ್ಟ ಠಾಣೆಗಳ ಪೊಲೀಸರಿಗೆ ಪರಿಶೀಲಿಸಲು ಸೂಚಿಸಲಾಗಿದೆ.