ಚಿತ್ರದುರ್ಗ : ಹೊಸದುರ್ಗ ಪಟ್ಟಣದಲ್ಲಿ ಸೆ.08 ರಂದು ವಿರಾಟ್ ಹಿಂದೂ ಮಹಾ ಗಣಪತಿ ಮೆರವಣಿಯಲ್ಲಿ ಕಲರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ ಸಿಡಿಸಿದ ಸಂಘಟಕರ ಮೇಲೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ಪಟಾಕಿ ಮತ್ತು ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಆದೇಶ ಉಲ್ಲಂಘಿಸಿ ಹೊಸದುರ್ಗದಲ್ಲಿ ವಿರಾಟ್ ಹಿಂದೂ ಮಹಾ ಗಣಪತಿ ಮೆರವಣಿಗೆ ವೇಳೆ ಮಧ್ಯಾಹ್ನ 3.30 ಸಮಯದಲ್ಲಿ ಪಟ್ಟಣದ ಜೂನಿಯರ್ ಕಾಲೇಜು ಮುಂಭಾಗದಲ್ಲಿ ಕಲರ್ ಬ್ಲಾಸ್ಟಿಂಗ್ ಮಾಡಲಾಗಿತ್ತು.
ರಾತ್ರಿ 8 ಗಂಟೆ ಸಮಯದಲ್ಲಿ ಪಟ್ಟಣದ ಹಿರಿಯೂರು ಸರ್ಕಲ್ ಸಮೀಪ ಪಟಾಕಿ ಸಿಡಿಮದ್ದನ್ನು ಸಿಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಂಘಟಕರಾದ ಪ್ರದೀಪ ತಂದೆ ಮರಿಯಾನಾಯ್ಕ್ ಹಾಗೂ ಶಿವರಾಜ್ ಕುಮಾರ್ ತಂದೆ ರಾಮಪ್ಪ ಇವರ ಮೇಲೆ ಬಿ.ಎನ್.ಎಸ್ ಕಲಂ 292 ಹಾಗೂ ಕೆ.ಪಿ.ಆಕ್ಟ್ ಕಲಂ.108, 109 ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
(ಸಾಂದರ್ಭಿಕ ಚಿತ್ರ)