ಹಾಂಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ (52.45 ಕೋಟಿ ರೂ.) ಕೊಟ್ಟು ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ.
ಹಾಂಕಾಂಗ್ನ ಖಾಸಗಿ ಹೋಟೆಲ್ನಲ್ಲಿ ಬಾಳೆಹಣ್ಣನ್ನು ಗೋಡೆಗೆ ಟೇಪ್ ಹಾಕಿ ಅಂಟಿಸಲಾಗಿತ್ತು. ಬಾಳೆಹಣ್ಣನ್ನು ಕಚ್ಚಿ ತಿಂದ ನಂತರ ಜಸ್ಟಿನ್ ಸನ್, ಇದು ಇತರ ಬಾಳೆಹಣ್ಣುಗಳಿಗಿಂತ ಇದು ನಿಜವಾಗಿಯೂ ತುಂಬಾ ಚೆನ್ನಾಗಿದೆ ಎಂದು ಹೇಳಿದರು.
ಜುಸ್ಟಿನ್ ಸನ್ ಡಜನ್‌ಗಟ್ಟಲೆ ಪತ್ರಕರ್ತರು ಮತ್ತು ಪ್ರಭಾವಿಗಳ ಮುಂದೆ ಬಾಳೆಹಣ್ಣನ್ನು ತಿಂದ ನಂತರ ಪರಿಕಲ್ಪನಾ ಕಲೆ ಮತ್ತು ಕ್ರಿಪ್ಟೋಕರೆನ್ಸಿಯ ನಡುವೆ ಸಮಾನಾಂತರವಿದೆ ಎಂದರು.
ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಅವರು ಕಲಾಕೃತಿ “ಕಮೀಡಿಯನ್”ನನ್ನು ಎನ್ಎಫ್ಟಿ ಮತ್ತು ವಿಕೇಂದ್ರೀಕೃತ ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ಹೋಲಿಸಿದ್ದಾರೆ. ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರ ಕಲಾಕೃತಿ. ಈ ಕಲಾಕೃತಿಗೆ ಕಲಾವಿದ ಮೌರಿಜಿಯೋ “ಕಮೀಡಿಯನ್” ಎಂದು ಹೆಸರಿಟ್ಟಿದ್ದರು. ಕಳೆದ ವಾರ ನ್ಯೂಯಾರ್ಕ್‌ನ ಸೋಥೆಬಿಸ್ನಲ್ಲಿ ನಡೆದ ಈ ಕಲಾಕೃತಿಯ ಹರಾಜಿನಲ್ಲಿ ಭಾಗವಹಿಸಿದ್ದ ಏಳು ಬಿಡ್‌ದಾರರ ಪೈಕಿ ಜಸ್ಟಿನ್ ಸನ್ ಅವರು 6.2 ಮಿಲಿಯನ್ ಡಾಲರ್ (52.45 ಕೋಟಿ ರೂ.) ಕೊಟ್ಟು ಕಲಾಕೃತಿಯನ್ನು ಖರೀದಿಸಿದ್ದರು.