ಕೊಡಗು : ಕಾಫಿ ತೋಟದಲ್ಲಿ ಕಾಣೆಯಾಗಿದ್ದ ಸುಕನ್ಯಾ ಎಂಬ ಎರಡು ವರ್ಷದ ಪುಟ್ಟ ಮಗುವನ್ನು ಶ್ವಾನ ಪತ್ತೆ ಹಚ್ಚಿದ ಘಟನೆ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಕಾರ್ಮಿಕ ದಂಪತಿ ಸುನಿಲ್ ಹಾಗೂ ನಾಗಿಣಿ ಕಾಫಿ ಕೊಯ್ಲಿಗೆ ತೆರಳುವಾಗ ತಮ್ಮ ಇಬ್ಬರು ಮಕ್ಕಳನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ಮಕ್ಕಳು ತೋಟದೊಳಗೇ ಆಟವಾಡುತ್ತಿದ್ದರು. ಸಂಜೆ ವೇಳೆಗೆ ಗಮನಿಸಿದಾಗ 2 ವರ್ಷದ ಸುಕನ್ಯಾ ನಾಪತ್ತೆಯಾಗಿರುವುದು ಪೋಷಕರಿಗೆ ಶಾಕ್ ಕೊಟ್ಟಿತು. ಪೋಷಕರೂ, ಸ್ಥಳೀಯರೂ ತಕ್ಷಣ ಹುಡುಕಾಟ ಆರಂಭಿಸಿದರು. ಮಾಹಿತಿ ದೊರೆತ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯರಾತ್ರಿ ತನಕ ಕಾಫಿ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಸ್ತೃತ ಶೋಧ ನಡೆಸಿದರೂ ಸುಳಿವು ದೊರೆತಿರಲಿಲ್ಲ.
ಮರುದಿನ ಬೆಳಿಗ್ಗೆ ಮತ್ತಷ್ಟು ಶೋಧ ಕಾರ್ಯ ಮುಂದುವರಿಸಲಾಯಿತು. ಈ ನಡುವೆ ಅನಿಲ್ ಎನ್ನುವವರ ಶ್ವಾನಗಳನ್ನು ಸಹ ಕಾರ್ಯಕ್ಕೆ ಕರೆಸಲಾಗಿತ್ತು. ಶೋಧಕ್ಕೆ ಬಳಸಿದ್ದ ಹಲವು ನಾಯಿಗಳಲ್ಲೊಂದು ‘ಓರಿಯೋ’ ಅಚ್ಚರಿಯ ರೀತಿ ಸುಳಿವು ಹಿಡಿದಿದೆ. ಓರಿಯೋ ಕಾಫಿ ತೋಟದ ಎತ್ತರವಿರುವ ಭಾಗದಲ್ಲಿ ಬೊಗಳಲು ಆರಂಭಿಸಿದ್ದು, ಅಧಿಕಾರಿಗಳು ಆ ಸ್ಥಳಕ್ಕೆ ಧಾವಿಸಿದರು. ಅಲ್ಲಿ ಸುಕನ್ಯಾ ಮಗು ಜೀವಂಯ ಪತ್ತೆಯಾದಳು. ದಟ್ಟ ಕತ್ತಲಿನ ನಡುವೆ ಒಂದು ರಾತ್ರಿ ಕಳೆದಿದ್ದರೂ ಮಗು ಸುರಕ್ಷಿತವಾಗಿರುವುದು ಅಧಿಕಾರಿಗಳಿಗೆ ಮತ್ತು ಕುಟುಂಬಕ್ಕೆ ಆಶ್ಚರ್ಯ ತಂದಿದೆ.
ಸುನಿಲ್ – ನಾಗಿಣಿ ದಂಪತಿ ಮಗಳನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಗ್ರಾಮಸ್ಥರೂ, ಅರಣ್ಯ ಸಿಬ್ಬಂದಿಯೂ ಶ್ವಾನ ಓರಿಯೋಗೆ ಅಭಿನಂದನೆ ಸಲ್ಲಿಸಿದರು. ಈ ಘಟನೆಯಿಂದ ಶ್ವಾನಗಳ ಶೋಧ ಸಾಮರ್ಥ್ಯ ಮತ್ತೆ ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
































