ನವದೆಹಲಿ: ನಕಲಿ ವೈದ್ಯ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನು ನೋಡಿಕೊಂಡು ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಆಪರೇಷನ್ ಮಾಡಿದ್ದಾನೆ. ಪರಿಣಾಮ ಆಪರೇಷನ್ ಸಮಯದಲ್ಲಿ ಮಹಿಳೆ ಮೃತಪಟ್ಟು, ಮಗು ಬಚಾವಾದ ಘಟನೆ ಬಿಹಾರದ ಭಾಗಲ್ಪುರದಲ್ಲಿ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಅವರ ಅತ್ತೆ-ಮಾವ ಜಾರ್ಖಂಡ್‌ನ ಠಾಕೂರ್ಗಂಟಿ ಮೋಧಿಯಾದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ರೋಷನ್ ಸಹಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯಾದ ನಂತರ ಆ ಮಹಿಳೆ ರಸಲ್‌ಪುರದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿದ್ದರು. ಅಲ್ಲಿ ಅವರು ಶ್ರೀಮಠ ಸ್ಥಾನದ ಬಳಿಯ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.
ಗುರುವಾರ ರಾತ್ರಿ ಸ್ವಾತಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಯನ್ನ ಪರೀಕ್ಷಿಸಿದ ವೈದ್ಯರು ತಮ್ಮ ಸಹಾಯಕರೊಂದಿಗೆ ಆಪರೇಷನ್ ಮಾಡಲು ಸಜ್ಜಾದರು. ಆ ಮಹಿಳೆಯ ಕುಟುಂಬದ ಒಪ್ಪಿಗೆಯನ್ನು ಪಡೆದ ನಂತರ ವೈದ್ಯರು ಹೆರಿಗೆಯ ಕಾರ್ಯವಿಧಾನವನ್ನು ಅರ್ಥ ಮಾಡಿಕೊಳ್ಳಲು ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿದರು. ಬಳಿಕ ಆ ಮೊಬೈಲನ್ನು ಆಪರೇಷನ್ ಮಾಡುವ ಜಾಗದಲ್ಲಿಟ್ಟುಕೊಂಡೇ ಅಗತ್ಯ ವೈದ್ಯಕೀಯ ಸಹಾಯವಿಲ್ಲದೆಯೇ ಗರ್ಭಿಣಿಗೆ ಆಪರೇಷನ್ ಮಾಡಿದ್ದಾರೆ.
ಈ ವೇಳೆ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾದಾಗ, ಉತ್ತಮ ಚಿಕಿತ್ಸೆಗಾಗಿ ಭಾಗಲ್ಪುರಕ್ಕೆ ಕರೆದೊಯ್ಯಲು ಸಲಹೆ ನೀಡಿದ್ದಾರೆ. ಕೂಡಲೇ ಆಸ್ಪತ್ರೆ ಮುಚ್ಚಿ ವೈದ್ಯರು ಪರಾರಿಯಾಗಿದ್ದರು.
ವೈದ್ಯರು ಸಾಮಾನ್ಯ ಹೆರಿಗೆಯ ಬದಲು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಒತ್ತಾಯಿಸಿ ಶುಲ್ಕವಾಗಿ 30,000 ರೂಪಾಯಿ ಕೇಳಿದರು. ಶಸ್ತ್ರಚಿಕಿತ್ಸೆಯ ನಂತರ ಮಗಳು ಮೃತಪಟ್ಟಳು ಎಂದು ಮೃತಳ ತಾಯಿ ಸುಷ್ಮಾ ತಿಳಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರು ಹಾಗೂ ಊರಿನವರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಸ್ವಾಧೀನಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಅಕ್ರಮ ಆಸ್ಪತ್ರೆಯನ್ನು ನಡೆಸುತ್ತಿರುವ ಅಮರ್ ಕುಮಾರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ ಮತ್ತು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆಸ್ಪತ್ರೆ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ನರ್ಸ್ ಮತ್ತು ಕಾಂಪೌಂಡರ್ ನೇಮಿಸಿಕೊಂಡಿದ್ದಾರೆ.
ಸದ್ಯ ಪೊಲೀಸರು ಅಕ್ರಮ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ಮಹಿಳೆಯ ಸಾವು ವರದಿಯಾಗಿದೆ, ತನಿಖೆ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ-ವಿಭಾಗೀಯ ಆಸ್ಪತ್ರೆಯ ಉಸ್ತುವಾರಿ ಉಪ ಸೂಪರಿಂಟೆಂಡೆಂಟ್ ಡಾ. ಪವನ್ ಕುಮಾರ್ ಗುಪ್ತಾ ಹೇಳಿದ್ದಾರೆ.
































