ಬಾಗಲಕೋಟೆ : ಒಳ್ಳೆಯ ಮನುಷ್ಯ ಸಿಎಂ ಆಗಬೇಕು ಅಂತ ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗ್ತೀನಿ ಎಂದು ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟದ ನಡುವೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಆಗುವ ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನಾನು ಸಿಎಂ ಯಾಕೆ ಆಗಬಾರದು? ನನ್ನಲ್ಲಿ ಏನು ಕೊರತೆ ಇದೆ? ಪ್ರಾಮಾಣಿಕರನ್ನ ಸಿಎಂ ಮಾಡಬೇಕು ಅಂದ್ರೆ ಮೊದಲು ನನ್ನ ಹೆಸರೇ ಬರುತ್ತೆ. ಇಲ್ಲದಿದ್ದರೆ ನನ್ನ ಪಾಡಿಗೆ ಇರ್ತೀನಿ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ಅಥವಾ ಏನಾದರೂ ಹಗರಣ ಇದ್ದಿದ್ದರೆ ನನ್ನನ್ನ ಬಿಡ್ತಿದ್ರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿದ್ದಾರೆ, ಗುಪ್ತಚರ ಇಲಾಖೆಯನ್ನೂ ಬಿಟ್ಟಿದ್ದರು. ಎಲ್ಲವನ್ನೂ ನೋಡಿದ್ರೂ ಏನೂ ಆಗಲಿಲ್ಲ. ಅದಕ್ಕೆ ಸುಮ್ಮನೆ ಕೂತಿದ್ದಾರೆ ಅಷ್ಟೇ. ನನ್ನ ಮೇಲೆ ಆ ಭಗವಂತನ ಕೃಪೆ ಇದೆ, ಜನರ ಶಕ್ತಿ ಇದೆ ಎಂದು ತಿಳಿಸಿದರು.