ಚಿತ್ರದುರ್ಗ : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಿಂದ ಹೊರಟ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಶುಕ್ರವಾದ ನಗರದಲ್ಲಿಡೆ ಸಾಗಿತು.
ಬಗೆ ಬಗೆಯ ಹೂವು, ಹಾರ, ಹಸಿರುಪತ್ರೆಗಳಿಂದ ಏಕನಾಥೇಶ್ವರಿಯನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು.
ಸುಗಂಧರಾಜ, ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹಾರಗಳಿಂದ ಸಿಂಗರಿಸಿ ಪೂಜಿಸಿದ ನಂತರ ಎತ್ತಿನಗಾಡಿನಲ್ಲಿ ಏಕನಾಥೇಶ್ವರಿಯನ್ನು ಕೂರಿಸಿ ನಗರದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರು ಭಕ್ತರು ಜಾತ್ರೆ ಬಯಲಿಗೆ ಆಗಮಿಸಿ ಏಕನಾಥೇಶ್ವರಿಗೆ ಪೂಜೆ ಸಲ್ಲಿಸಿದರು.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಏಕನಾಥೇಶ್ವರಿಗೆ ಪೂಜೆ ಸಮರ್ಪಿಸಿದರು.
ಡೊಳ್ಳು, ತಮಟೆ, ಉರುಮೆ, ಕಹಳೆ ವಾದ್ಯಗಳಿಗೆ ಮೆರವಣಿಗೆಯಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಮಾಜಿ ಉಪಾಧ್ಯಕ್ಷರುಗಳಾದ ಬಿ.ರಾಮಜ್ಜ, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಮಾಜಿ ಸದಸ್ಯ ಸಿಟಿ.ರಾಜೇಶ್, ನಾಮ ನಿರ್ದೇಶಕ ಮಾಜಿ ಸದಸ್ಯ ಓಂಕಾರ್, ತಾಲ್ಲೂಕು ಕಚೇರಿಯ ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್, ಏಕನಾಥೇಶ್ವರಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷಬಜಮೀನ್ದಾರ್ ದೊರೆಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿದ್ದರು.
ಚಿತ್ರದುರ್ಗ : ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮನ ಮೆರವಣಿಗೆ ನಗರದಲ್ಲಿಂದು ವಿಜೃಂಭಣೆಯಿಂದ ನಡೆಯಿತು.
ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿವೃತ್ತ, ಲಕ್ಷ್ಮಿಬಜಾರ್ ಮೂಲಕ ಆನೆಬಾಗಿಲು ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ದೊಡ್ಡಪೇಟೆಯ ರಾಜಬೀದಿಯಲ್ಲಿ ಸಾಗಿತು.
ಬಣ್ಣ ಬಣ್ಣದ ಹೂವು ಹಾಗೂ ಹಾರಗಳಿಂದ ಮನಮೋಹಕವಾಗಿ ಬರಗೇರಮ್ಮನನ್ನು ಸಿಂಗರಿಸಲಾಗಿತ್ತು. ಸುಡುಬಿಸಿಲನ್ನು ಲೆಕ್ಕಿಸದೆ ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಗೊಂಬೆ ಕುಣಿತ, ಸೋಮನ ಕುಣಿತ, ಡೊಳ್ಳು, ತಮಟೆ, ಉರುಮೆ ಸದ್ದಿಗೆ ಭಕ್ತರು ಹೆಜ್ಜೆ ಹಾಕುತ್ತಿದ್ದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಪೂಜೆ ಸಲ್ಲಿಸಿ ಬರಗೇರಮ್ಮನಿಗೆ ಭಕ್ತಿ ಸಮರ್ಪಿಸಿದರು.